ಭೋಪಾಲ್: ಮಧ್ಯಪ್ರದೇಶದಲ್ಲಿ ನಿಗದಿಯಾಗಿದ್ದ I.N.D.I.A ಒಕ್ಕೂಟದ ಮೊದಲ ರ‍್ಯಾಲಿ ರದ್ದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ಮಾಹಿತಿ ನೀಡಿದ್ದಾರೆ. ಅಕ್ಟೋಬರ್ ಮೊದಲ ವಾರದಲ್ಲಿ ಬೃಹತ್ ರ‍್ಯಾಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಈ ಕುರಿತು ಮಾತುಕತೆ ಮುಂದುವರಿದಿರುವ ಕಾರಣ ಹೊಸ ದಿನಾಂಕ ಸದ್ಯದಲ್ಲೇ ಘೋಷಿಸಲಾಗುವುದು ಎಂದಿದ್ದಾರೆ.
ಭೋಪಾಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ, ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಇದಕ್ಕಾಗಿ ‘ಜನಾಕ್ರೋಶ ಯಾತ್ರೆ’ ನಡೆಸಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ‘ಕಾಂಗ್ರೆಸ್ ಕಾಲ್ಗುಣದಿಂದ ರಾಜ್ಯದಲ್ಲಿ ಬರ ಬಂದಿದೆ’
ಸೆಪ್ಟೆಂಬರ್ 19ರಿಂದ 7 ಕಡೆಗಳಲ್ಲಿ ಜನಾಕ್ರೋಶ ಯಾತ್ರೆ ಹೊರಡಲಿದೆ. ಈ ಯಾತ್ರೆಗಳು 15 ದಿನಗಳ ಅವಧಿಯಲ್ಲಿ ಮಧ್ಯಪ್ರದೇಶದ ಎಲ್ಲಾ 230 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ 11,400 ಕಿ.ಮೀ ಕ್ರಮಿಸಲಿದೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಡಾ. ಗೋವಿಂದ್ ಸಿಂಗ್ ಸೇರಿದಂತೆ ಹಲವು ನಾಯಕರು ಯಾತ್ರೆಗಳ ಮುನ್ನಡೆಸಲಿದ್ದಾರೆ ಎಂದರು.
ಇದನ್ನೂ ಓದಿ: ವಾಕ್ ಸ್ವಾತಂತ್ರ್ಯವು ದ್ವೇಷ ಭಾಷಣವಾಗಿ ಬದಲಾಗಬಾರದು; ಮದ್ರಾಸ್ ಹೈಕೋರ್ಟ್
ಈ ಹಿನ್ನೆಲೆ ಅಕ್ಟೋಬರ್ ಮೊದಲ ವಾರ ನಡೆಯಬೇಕಿದ್ದ I.N.D.I.A ಒಕ್ಕೂಟದ ಮೊದಲ ರ‍್ಯಾಲಿಯು ರದ್ದಾಗಿದೆ ಎನ್ನಲಾಗಿದೆ. ಸದ್ಯದಲ್ಲೇ ಹೊಸ ದಿನಾಂಕ ಮತ್ತು ಸ್ಥಳವನ್ನು ಒಕ್ಕೂಟವೂ ಬಹಿರಂಗಪಡಿಸಲಿದೆ ಎಂದು ತಿಳಿದುಬಂದಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.