ಧಾರವಾಡ: ದೇಶದ ಸಂಸ್ಕೃತಿ ಉಳಿಸಿದ ವಿಶ್ವಕರ್ಮ ಸಮಾಜ ಇಂದು ನಡುಬೀದಿಯಲ್ಲಿ ನಿಂತಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶ್ವಕರ್ಮ ಸಮಾಜವು ಶಿಕ್ಷಣ, ಉದ್ಯೋಗ, ರಾಜಕೀಯ ಹಾಗೂ ಆರ್ಥಿಕತೆಯಲ್ಲಿ ಹಿಂದುಳಿದಿದ್ದು, ಸಾಮಾಜಿಕ ನ್ಯಾಯಕ್ಕಾಗಿ ಲಕ್ಷಕ್ಕೂ ಹೆಚ್ಚು ಜನರಿಂದ ಬೀದರದಿಂದ ಬೆಂಗಳೂರು ವರೆಗೆ ಪಾದಯಾತ್ರೆ ಮಾಡಲು ತೀರ್ಮಾನಿಸಲಾಗಿದೆ ಎಂದರು.
ರಾಜ್ಯದಲ್ಲಿ 40 ಲಕ್ಷ ಸಮಾಜದ ಜನಸಂಖ್ಯೆ ಇದೆ. ಆದರೆ ಸಮಾಜದ ಜನರು ಗಟ್ಟಿಇಲ್ಲ. ಅವರಲ್ಲಿ ಸ್ಥಿರತೆ ಇಲ್ಲವಾಗಿದೆ. ಹಾಗಾಗಿ ಯಾವುದೇ ರಾಜಕೀಯ ಅಧಿಕಾರ ಪಡೆಯಲು ಸಾಧ್ಯವಾಗಿಲ್ಲ. ಅಧಿಕಾರ ಸಿಕ್ಕರೆ ಮಾತ್ರ ಸಮುದಾಯದ ಬೆಳವಣಿಗೆ ಸಾಧ್ಯ ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದು ಸಲಹೆ ನೀಡಿದರು.
2ಎ ಮೀಸಲಾತಿಯಲ್ಲಿ ದೊಡ್ಡ ಸಮಾಜಗಳು ಇರುವ ಕಾರಣ ವಿಶ್ವಕರ್ಮಕ್ಕೆ ಯಾವ ಪ್ರಯೋಜನ ಆಗುತ್ತಿಲ್ಲ. ಸಮಾಜ ಹಿನ್ನೆಲೆ ಬಗ್ಗೆ ಸಮಾಜದ ಜನರಿಗೆ ತಿಳಿವಳಿಕೆ ಇಲ್ಲ. ಆದ್ದರಿಂದ ರಾಜ್ಯದ 745 ಹೋಬಳಿ, 220 ತಾಲೂಕು ಹಾಗೂ 31 ಜಿಲ್ಲೆಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ. ಯಾವುದನ್ನೂ ಸರ್ಕಾರ ಪ್ರೀತಿ, ಗೌರವದಿಂದ ಕೊಟ್ಟಿಲ್ಲ. ಹೀಗಾಗಿ ಬೀದರ-ಬೆಂಗಳೂರು ಪಾದಯಾತ್ರೆ ಮಾಡಲಾಗುವುದು ಎಂದರು.