ಬೆಂಗಳೂರು : ರಾಜ್ಯಾದ್ಯಂತ ಬೂತ್ ವಿಜಯ ಅಭಿಯಾನ ಮಾಡುತ್ತಿದ್ದೇವೆ. ಜನವರಿ 2 ರಿಂದ 12 ರವರೆಗೂ ಅಭಿಯಾನ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ತಿಳಿಸಿದ್ದಾರೆ.
ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿ, ಮಿಷನ್ 150 ಭಾಗವಾಗಿ ನಾಳೆಯಿಂದ ರಾಜ್ಯ ಬಿಜೆಪಿಯ ಮಹತ್ವಾಕಾಂಕ್ಷೆಯ ಬೂತ್ ವಿಜಯ್ ಅಭಿಯಾನ ಆರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ 10 ದಿನಗಳಲ್ಲಿ 50 ಲಕ್ಷ ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸುವ ಗುರಿಯನ್ನು ಭಾರತೀಯ ಜನತಾ ಪಕ್ಷ ಹಾಕಿಕೊಂಡಿದೆ. ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರು, ಶಾಸಕರು, ಸಂಸದರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಯಾನಕ್ಕೆ ಚಾಲನೆ ನೀಡಿದ್ದು, ಬಿಜೆಪಿ ಸಂಘಟನಾತ್ಮಕ 39 ಜಿಲ್ಲೆ, 312 ಮಂಡಲ, 1445 ಮಹಾಶಕ್ತಿ ಕೇಂದ್ರ, 11,642 ಶಕ್ತಿಕೇಂದ್ರ, 58186 ಬೂತ್‌ಗಳಲ್ಲಿ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು. ಈ ಅಭಿಯಾನದಲ್ಲಿ 20 ಲಕ್ಷ ಕಾರ್ಯಕರ್ತರು ಕೆಲಸ ಮಾಡುತ್ತಾರೆ ಎಂದು ವಿವರಿಸಿದರು.
ಬೂತ್ ಸಮಿತಿಯನ್ನು ಪರಿಶೀಲನೆ ನಡೆಸುವುದು, ಪೇಜ್ ಪ್ರಮುಖರ ನಿಯುಕ್ತಿಗೊಳಿಸುವುದು, ವಾಟ್ಸ್ ಆ್ಯಪ್ ಗ್ರೂಪ್ ಕ್ರಿಯೇಟ್ ಮಾಡುವುದು, 50 ಲಕ್ಷ ಮನೆ ಮೇಲೆ ಬಿಜೆಪಿ ಧ್ವಜ ಹಾರಿಸುವುದು, ಪ್ರಧಾನಿಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಜನತೆಗೆ ತಲುಪಿಸುವುದು ಬೂತ್ ವಿಜಯ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.