ಬೆಂಗಳೂರು: ಶ್ರೀರಾಮುಲು ಹತ್ತಾರು ವರ್ಷಗಳಿಂದ ನನ್ನ ಆತ್ಮೀಯ ಸ್ನೇಹಿತ. ಬಳ್ಳಾರಿ ಜನರ ಸೇವೆಗೆ ನಾನು ಸದಾ ಸಿದ್ಧ,ನಿಂತರೆ ಬಳ್ಳಾರಿ ಜಿಲ್ಲೆಯಿಂದಲೇ ನಿಲ್ಲುತ್ತೇನೆ ಎಂದು ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಹೇಳಿದರು.
ಜನಾರ್ದನ ರೆಡ್ಡಿ ಬೆಂಗಳೂರು ನಿವಾಸ ‘ಪಾರಿಜಾತ’ದಲ್ಲಿ ಕರೆದಿದ್ದ ಸುದ್ದಿಗೋಷ್ಠಿ ತೀವ್ರ ಕುತೂಹಲ ಮೂಡಿಸಿತ್ತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ಇಂದು ಭಾರತ ಕಂಡ ಧೀಮಂತ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು ಎಂದರು.
ಅಣ್ಣ ಬಸವಣ್ಣನವರ ವಚನ ಕಾಯಕವೇ ಕೈಲಾಸದ ತತ್ವ ನಂಬಿದವನು ನಾನು. ಶ್ರದ್ಧೆಯಿಂದ ಕೆಲಸ ಮಾಡಿಕೊಂಡು ಈವರೆಗೆ ಬಂದು ತಲುಪಿದ್ದೇನೆ. ಸತ್ಯದ ವಿಚಾರವನ್ನೇ ಹೇಳಿಕೊಂಡು ಬಂದಿದ್ದೇನೆ. ನನ್ನ 21ನೇ ವಯಸ್ಸಿನಲ್ಲಿ ಇನೋಬ್ಲಿಟಿ ಸಂಸ್ಥೆ ಆರಂಭಿಸಿದ್ದೆ. ನನ್ನ ಮೈನಿಂಗ್ ಕಂಪನಿಯಲ್ಲಿ ದೇವರು ಕೇಳಿಕೊಂಡಿದ್ದಕ್ಕೂ ಹೆಚ್ಚು ಕೊಟ್ಟಿದ್ದಾನೆ’ ಎಂದು ಸ್ಮರಿಸಿದರು.
ಬಿಜೆಪಿಯಿಂದ ದೂರ ಹೋಗಿ ಪ್ರತ್ಯೇಕ ಪಕ್ಷ ಕಟ್ಟಲಿದ್ದಾರೆ, ಸಚಿವ ಶ್ರೀರಾಮುಲುರೊಂದಿಗೆ ಮುನಿಸಿಕೊಂಡಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದರು. ‘ಶ್ರೀರಾಮಲು ಹಾಗೂ ನನ್ನ ಸ್ನೇಹಕ್ಕೆ ಹಲವು ವರ್ಷಗಳ ಹಿನ್ನೆಲೆಯಿದೆ. ನಾವು ಚಿಕ್ಕ ವಯಸ್ಸಿನಿಂದಲೂ ಸ್ನೇಹಿತರು. ಶ್ರೀರಾಮಲು ಬಡವರ ಪರವಾಗಿ ಇರುವ ನಾಯಕ ಎಂದರು.