ಬೆಂಗಳೂರು: ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ‘ಮತದಾರರ ಮಹಾಚೇತನ ಅಭಿಯಾನ’ ಸಭೆ ಮುಕ್ತಾಯವಾಗಿದ್ದು, ಸೆಪ್ಟೆಂಬರ್ 6 ರಿಂದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟಿಸಲು ಸೂಚನೆ ನೀಡಿಲಾಗಿದ್ದು, ಬೂತ್ ಗಳನ್ನು ಸಂಘಟಿಸಿ ಬಲಗೊಳಿಸುವಂತೆ ಮುಖಂಡರಿಗೆ ಬಿ ಎಲ್ ಸಂತೋಷ್ ಟಾಸ್ಕ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಸಭೆ ಬಳಿಕ ಸುದ್ದಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಎಂ.ಜಿ. ಮಹೇಶ್, ‘ಸಭೆಗೆ ಗೈರಾಗಿದ್ದವರು ಮೊದಲೇ ಮಾಹಿತಿ ಕೊಟ್ಟಿದ್ರು; ಯಾರೂ ಉದ್ದೇಶಪೂರ್ವಕವಾಗಿ ಗೈರಾಗಿರಲಿಲ್ಲ. ಬೇರೆಬೇರೆ ಕಾರ್ಯಗಳು ನಿಗದಿ ಆಗಿದ್ದರಿಂದ ಕೆಲವರು ಗೈರಾಗಿದ್ದರು. ಸಭೆಯಲ್ಲಿ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಆಗಿದೆ; ಚಂದ್ರಯಾನ-3 ಯಶಸ್ಸಿನ ಬಗ್ಗೆಯೂ ಚರ್ಚೆ ನಡೀತು. ಚಂದ್ರಯಾನ-3ರ ಸಾಧನೆಗೆ ಕಾರಣರಾದವರನ್ನೂ ಆಯಾಯಾ ಕ್ಷೇತ್ರಗಳಲ್ಲಿ ಸನ್ಮಾನಿಸುವುದು, ಅಭಿಯಾನ ಜಾಗೃತಿ ನಡೆಸುವ ಬಗ್ಗೆ ತೀರ್ಮಾನ ಮಾಡಲಾಗಿದೆ’ ಎಂದು ಹೇಳಿದರು.
ಇದನ್ನೂ ಓದಿ; ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ! ಬಿ ಎಲ್ ಸಂತೋಷ್ ಸಭೆಗೆ ಹಲವರು ಗೈರು
‘ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಚರ್ಚಿಸಲಾಗಿದೆ. ಸದ್ಯ ರಾಜ್ಯದಲ್ಲಿ ಸೃಷ್ಟಿಯಾಗಿರುವ ಸವಾಲನ್ನು ಎದುರಿಸುವ ಬಗ್ಗೆ ಮಾತುಕತೆ ನಡೆಸಿದ್ದೇವೆ. ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿ ಕೆಲಸ ಮಾಡುವಂತೆ ವರಿಷ್ಠರು ಸೀಚಿಸಿದ್ದಾರೆ. ವಿಪಕ್ಷವಾಗಿ ಸರ್ಕಾರದ ವಿರುದ್ಧ ರಚನಾತ್ಮಕ ಹೋರಾಟಕ್ಕೆ ಸಭೆಯಲ್ಲಿ ಸಲಹೆ ನೀಡಿದ್ದಾರೆ’ ಎಂದು ಮಹೇಶ್ ಮಾಹಿತಿ ನೀಡಿದರು.
‘ಈ ಸಭೆಗೆ ಎಲ್ಲ ಚುನಾಯಿತರೂ, ಅಭ್ಯರ್ಥಿಗಳಾಗಿದ್ದವ ಹಾಗೂ ಅಪೇಕ್ಷಿತರಾಗಿದ್ದವರಿಗೆ ಆಹ್ವಾನ ಕೊಡಲಾಗಿತ್ತು. ಕೆಲವರು ಸಭೆಗೆ ಬಂದಿಲ್ಲ, ಅವರು ನಮಗೆ ಪೂರ್ವ ಮಾಹಿತಿಯೂ ಕೊಟ್ಟಿಲ್ಲ. ಕಾಂಗ್ರೆಸ್ ನಿಂದ ನಡೆಯುತ್ತಿರುವ ಆಪರೇಷನ್ ಪ್ರಯತ್ನಗಳ ಬಗ್ಗೆಯೂ ಚರ್ಚೆ ನಡೆಯಿತು. ಸಭೆಯಲ್ಲಿ ಇದರ ಬಗ್ಗೆ ಬಿ ಎಲ್ ಸಂತೋಷ್ ಮಾತಾಡಿದ್ರು; ಬಿಜೆಪಿ ದುರ್ಬಲ ಮಾಡುವ ಕಾರ್ಯತಂತ್ರ ಇದು. ಯಾರೂ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಹೋಗಲ್ಲ. ಕಾಂಗ್ರೆಸ್ ನವರೇ ಸುಮಾರು 40-45 ಮುಖಂಡರು ಬಿಜೆಪಿ ಸೇರಲು ಸಂಪರ್ಕಿಸಿದ್ದಾರೆ ಅಂತ ಸಂತೋಷ್ ಹೇಳಿದ್ದಾರೆ’ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.