ಹುಬ್ಬಳ್ಳಿ : ವಿಧಾನಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಪಕ್ಷದ ವಿರುದ್ಧ ಅಸಮಾಧಾನದ ಹೊರ ಹಾಕಿರುವ ಬೆನ್ನಲ್ಲೇ ಬಿಜೆಪಿ ರಾಜ್ಯ ನಾಯಕರು ಅಲರ್ಟ್ ಆಗಿದ್ದು, ತಡರಾತ್ರಿ ನಗರದ ಹೋಟೆಲ್ ನಲ್ಲಿ ಕೋರ್ ಕಮಿಟಿ ಸಭೆ ನಡೆಸಿದ್ದಾರೆ. ಆದರೆ, ಸಭೆಗೆ ಪ್ರದೀಪ್ ಶೆಟ್ಟರ್, ಹಾಗೂ ಮಾಜಿ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಗೈರಾಗಿದ್ದಾರೆ.
ಸಭೆ ಬಳಿಕ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಲೋಕಸಭಾ ಚುನಾವಣೆ ಎದುರಿಸುತ್ತೇವೆ. ಪಕ್ಷದೊಳಗೆ ಅಸಮಾಧಾನ ವ್ಯಕ್ತಪಡಿಸಿರುವವರ ಬಗ್ಗೆ ಚರ್ಚಿಸಿದ್ದೇವೆ. ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕೆಂದು ಸಭೆಯಲ್ಲಿ ತೀರ್ಮಾನಿಸಿದ್ದೇವೆ. ಕೆಲವರು ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಲಿಂಗಾಯತರಿಗೆ ಅನ್ಯಾಯ ಆಗುತ್ತಿದೆ ಎಂದು ಹೇಳಿದ್ದಾರೆ. ಇವು ಬಗೆಹರಿಸಲಾಗದ ಸಮಸ್ಯೆಗಳೇನಲ್ಲ. ವಿಶ್ವಾಸಕ್ಕೆ ತೆಗೆದುಕೊಂಡು ಹೋದ್ರೆ ಎಲ್ಲವೂ ಸರಿ ಹೋಗುತ್ತದೆ. ಪ್ರದೀಪ್ ಶೆಟ್ಟರ್ ಮತ್ತು ಶಂಕರ ಪಾಟೀಲ ಮುನೇನಕೊಪ್ಪರಿಂದ ಹಿಡಿದು ಎಲ್ಲರ ಜೊತೆಯೂ ಮಾತನಾಡಿದ್ದೇವೆ. ಬೂತ್ ಮಟ್ಟದದಿಂದ ಪಕ್ಷ ಸಂಘಟನೆ ಮಾಡಬೇಕಿದೆ ಎಂದರು.
ಇದನ್ನೂ ಓದಿ : ಆರ್.ಅಶೋಕ್‌ಗೆ ಸಂಕಷ್ಟ ತಂದಿಟ್ಟ ‘ಡಿ.ಕೆ. ಸಹೋದರರು’!
ರಾಜ್ಯ ಸರ್ಕಾರ ಕಳೆದ ನಾಲ್ಕು ತಿಂಗಳಿಂದ ಜನ ವಿರೋಧಿ ಆಡಳಿತ ಮಾಡಿದೆ. ಜನರಿಗೆ ಸುಳ್ಳು ಹೇಳಿದೆ, ಮೋಸ ಮಾಡಿದೆ. ವರ್ಗಾವಣೆ ದಂಧೆಯ ಮೂಲಕ ಸಾಕಷ್ಟು ಭ್ರಷ್ಟಾಚಾರ ನಡೆಸಿದೆ. ಈ ನಿಟ್ಟಿನಲ್ಲಿ ಜಿಲ್ಲಾವಾರು ಪ್ರವಾಸ ಮಾಡಿ ಹೋರಾಟದ ರೂಪರೇಷೆ ಸಿದ್ದಪಡಿಸಬೇಕಿದೆ. ಇಷ್ಟೊತ್ತಿಗಾಗಲೇ ಬರಗಾಲ ಘೋಷಣೆ ಆಗಬೇಕಿತ್ತು. ಜೂನ್‌ನಲ್ಲಿ ಕೇಳಿದ್ರೆ ಜುಲೈ ಅಂತಾರೆ, ಜುಲೈನಲ್ಲಿ ಕೇಳಿದ್ರೆ ಆಗಸ್ಟ್ ಅಂತಾರೆ. ಈಗ ಆಗಸ್ಟ್ ಕಳೆದು ಸೆಪ್ಟಂಬರ್ ಬಂದಿದೆ. ಆದ್ರೂ ಬರಗಾಲ ಘೋಷಣೆ ಮಾಡುತ್ತಿಲ್ಲ. ಎಲ್ಲಾ ವಿಚಾರಗಳಲ್ಲೂ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಬಣ್ಣ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.