ಅಹಮದಾಬಾದ್ : ಭಾರತೀಯ ಜನತಾ ಪಾರ್ಟಿ ಗುಜರಾತ್ ವಿಧಾನಸಭಾ ಚುನಾವಣಾಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಜನರ ಜೀವ ಕಾಪಾಡಲು ಮಚು ನದಿಗೆ ಇಳಿದಿದ್ದ ಮಾಜಿ ಶಾಸಕರಿಗೆ ಟಿಕೆಟ್ ನೀಡಿದೆ.
ಸೇತುವೆ ದುರಂತ ಬಿಜೆಪಿಗೆ ದೊಡ್ಡ ಹೊಡೆತ ನೀಡುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಇದನ್ನೇ ಬಂಡವಾಳ ಮಾಡಿಕೊಳ್ಳಲು ಬಿಜೆಪಿ ಬಯಸುತ್ತಿದೆ. 60 ವರ್ಷದ ಕಾಂತಿಲಾಲ್ ಅಮೃತಿಯಾ ದುರಂತ ನಡೆದ ಮೊರ್ಬಿಯಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮೊರ್ಬಿಯ ಹಾಲಿ ಶಾಸಕ ಬ್ರಿಜೇಶ್ ಮೆರ್ಜಾ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಸೇತುವೆ ದುರಂತದ ವಳೆಯಲ್ಲಿ ನದಿಯಲ್ಲಿ ಮುಳುಗುತ್ತಿದ್ದವರ ಜೀವ ಉಳಿಲು ತಾವೇ ನದಿಗೆ ಧುಮುಕಿದ ಅವರ ಸಾಹಸದಿಂದಾಗಿ ಈ ಬಾರಿ ಗುಜರಾತ್ ಚುನಾವಣೆಯಲ್ಲಿ ಮೊರ್ಬಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಅಪಘಾತದ ಸಂದರ್ಭದಲ್ಲಿ ತೋರಿದ ಧೈರ್ಯಕ್ಕೆ ಪ್ರತಿಫಲ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.
ಅಕ್ಟೋಬರ್ 30 ರಂದು ಶತಮಾನದಷ್ಟು ಹಳೆಯದಾದ ಮೊರ್ಬಿಯಲ್ಲಿರುವ ತೂಗು ಸೇತುವೆಯ ಕೇಬಲ್‌ಗಳು ಮುರಿದು ಬಿದ್ದು, ನೂರಾರು ಜನರು ನದಿಗೆ ಬಿದ್ದಿದ್ದರು. ಈ ವೇಳೆ 60 ವರ್ಷದ ಕಾಂತಿಲಾಲ್ ಅಮೃತಿಯ ಲೈಫ್ ಟ್ಯೂಬ್ ಧರಿಸಿ ನದಿಗೆ ಹಾರಿ ಜನರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.
ಗುಜರಾತ್ ಚುನಾವಣೆಗೆ ಬಿಜೆಪಿ ಗುರುವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 182 ವಿಧಾನಸಭಾ ಸ್ಥಾನಗಳಲ್ಲಿ 160 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.