ಶಿಮ್ಲಾ : ಬಿಜೆಪಿಯ ಪರಿಕಲ್ಪನೆಯನ್ನು ಯಾರೂ ಒಪ್ಪುವುದಿಲ್ಲ. ಹಿಮಾಚಲ ಪ್ರದೇಶದ ಜನರು ತಮ್ಮ ಒಳಿತಿಗಾಗಿ ಸರ್ಕಾರವನ್ನು ಬದಲಾಯಿಸಬೇಕಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿ, ಯುವ ಸಮೂಹಕ್ಕೆ ಉದ್ಯೋಗದ ಬದಲಾಗಿ ಡ್ರಗ್ಸ್ ನೀಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಇದೇ ವೇಳೆ ಬಿಜೆಪಿ (BJP) ಉದ್ಯೋಗ ಸೃಷ್ಟಿಸುವ ಭರವಸೆಗಳ ಕುರಿತು ವಾಗ್ದಾಳಿ ನಡೆಸಿದ ಪ್ರಿಯಾಂಕಾ, ಯುವ ಸಮೂಹ ಏನಾದರೂ ಕೆಲಸ ಮಾಡಿ ತಮ್ಮ-ತಮ್ಮ ಕುಟುಂಬವನ್ನು ನೋಡಿಕೊಳ್ಳಬೇಕು ಎಂದು ಬಯಸುತ್ತಿದ್ದಾರೆ. ಅವರ ಕನಸುಗಳು ಈಡೇರುತ್ತಿಲ್ಲ. ಡ್ರಗ್ಸ್ ಹಾವಳಿ ಹೆಚ್ಚಾಗಿ ದಾರಿ ತಪ್ಪುತ್ತಿದ್ದಾರೆ. ಹಾಗಾಗಿ ಹಿಮಾಚಲ ಪ್ರದೇಶದಲ್ಲಿ ಸುಮಾರು 30 ಲಕ್ಷ ಮಂದಿ ಯುವಸಮೂಹದವರು ಇದ್ದರೂ, 15 ಲಕ್ಷ ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಛತ್ತಿಸ್‌ಗಢದಲ್ಲಿ ಅತ್ಯಂತ ಕಡಿಮೆ ನಿರುದ್ಯೋಗ ಇದೆ. ಕಳೆದ 3 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಅಲ್ಲಿ 5 ಲಕ್ಷ ಉದ್ಯೋಗಗಳನ್ನು ನೀಡಿದೆ. ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ 1.3 ಲಕ್ಷ ಉದ್ಯೋಗ ಕಲ್ಪಿಸಿದೆ. ಆದರೆ ಹಿಮಾಚಲ ಪ್ರದೇಶದಲ್ಲಿ 63 ಸಾವಿರ ಹುದ್ದೆಗಳು ಖಾಲಿಯಿದ್ದರೂ, ಬಿಜೆಪಿ ಅವುಗಳನ್ನು ಭರ್ತಿ ಮಾಡಿಲ್ಲ.
ವಿದ್ಯಾವಂತ ಯುವಕರು, ಶ್ರಮಜೀವಿಗಳು ಉದ್ಯೋಗಕ್ಕಾಗಿ ಹಾತೊರೆಯುತ್ತಿದ್ದಾರೆ. ಆದರೆ ಬಿಜೆಪಿ ಉದ್ಯೋಗದ ಬದಲಿಗೆ ಡ್ರಗ್ಸ್ ನೀಡುತ್ತಿದೆ ಎಂದು ಕಿಡಿ ಕಾರಿದ್ದಾರೆ.