ಕೋಲಾರ: ಹೊಸ ಪಕ್ಷ ಕಟ್ಟಿದವರು ಈಗ ಯಾರೂ ಉಳಿದಿಲ್ಲ, ಎಷ್ಟು ಮಂದಿ ಜನಾರ್ದನ ಬಂದ್ರೂ ಬಿಜೆಪಿಗೆ ಸಣ್ಣ ತೊಂದರೆಯೂ ಆಗಲ್ಲ. ಇನ್ನೂ ಇಪ್ಪತ್ತು ಮಂದಿ ಪಕ್ಷ ಕಟ್ಟಿದರೂ ನಮ್ಮ ಪಕ್ಷಕ್ಕೆ ಏನೂ ಆಗೋಲ್ಲ ಎಂದು ಸಚಿವ ಮುನಿರತ್ನ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಬಂಗಾರಪ್ಪ, ದೇವರಾಜ ಅರಸು ಸೇರಿದಂತೆ ಹಲವು ನಾಯಕರು ಪಕ್ಷ ಕಟ್ಟಿದ್ರು, ಅವು ಯಾವುದೂ ಈಗ ಕಣ್ಣಿಗೆ ಕಾಣಿಸ್ತಿಲ್ಲ. ಹಾಗೆಯೇ ಎಷ್ಟು ಮಂದಿ ಜನಾರ್ದನ ಬಂದರೂ ಬಿಜೆಪಿಗೆ ಯಾವುದೇ ತೊಂದರೆ ಆಗಲ್ಲ ಎಂದುತಿರುಗೇಟು ನೀಡಿದ್ದಾರೆ.
ಜನಾರ್ದನ ರೆಡ್ಡಿ ವಿಚಾರದಲ್ಲಿ ಕೇಂದ್ರದ ನಾಯಕರ ತೀರ್ಮಾನ ಇರುತ್ತದೆ. ರೆಡ್ಡಿಯವರು ಆತುರದ ತೀರ್ಮಾನ ತೆಗೆದುಕೊಂಡಿದ್ದಾರೆ. ರಾಜಕಾರಣಿಗಳಿಗೆ ತಾಳ್ಮೆ ಬಹಳ ಮುಖ್ಯ, ಕೇಂದ್ರದ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಮಾಡಬೇಕಿತ್ತು ಎಂದು ಹೇಳಿದ್ದಾರೆ.
ಜನಾರ್ದನ ರೆಡ್ಡಿ ಗಂಗಾವತಿಗೆ ಮಾತ್ರ ಅಭ್ಯರ್ಥಿ ಆಗುತ್ತೇನೆ ಅಂತಾ ಹೇಳಿಕೊಂಡು ಬಂದಿದ್ದರು. ಈಗ ಪಕ್ಷ ಕಟ್ಟುತ್ತೇನೆ ಅಂತಾರೆ. ಕೆಎಂಎಫ್ ವಿಲೀನ ವಿಚಾರದಲ್ಲಿ ಮಾತನಾಡಿ, ಕಾಂಗ್ರೆಸ್‌ನವರಿಗೆ ಮಾಡಲು ಕೆಲಸ ಇಲ್ಲ.ಇದು ಕಾಂಗ್ರೆಸ್‌ನವರ ಪಿತೂರಿ ಎಂದಿದ್ದಾರೆ.