ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿವೆ ಎಂಬ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮಾಡಿಕೊಳ್ಳಲಿ ಬಿಡ್ರಿ, ನಮಗೇನು’ ಎಂದು ಮಾಧ್ಯಮ ಪ್ರತಿನಿಧಿಗಳನ್ನೇ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ‘ಮಾಡಿಕೊಳ್ಳಲಿ ಬಿಡ್ರಿ, ನಮಗೇನು? ಯಾರು ಮೈತ್ರಿ ಮಾಡಿಕೊಳ್ಳುತ್ತಾರೋ, ಪ್ರತ್ಯೇಕವಾಗಿ ಸ್ಪರ್ಧಿಸುತ್ತಾರೊ ಅದರ ಬಗ್ಗೆ ಎಲ್ಲ ನಾವು ತಲೆ ಕೆಡಿಸಿಕೊಳ್ಳಲ್ಲ. ನಾವು ಜನರ ಹತ್ತಿರ ಮತ ಕೇಳ್ತೀವಿ, ಜನರು ನಮ್ಮ ಪರವಾಗಿದ್ದಾರೆ, ನಮಗೆ ಮತ ಹಾಕ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ; ತೆನೆ-ಕಮಲ ಮೈತ್ರಿ ಫಿಕ್ಸ್, ಜೆಡಿಎಸ್ ಗೆ ನಾಲ್ಕು ಸೀಟ್ : ಬಿಎಸ್ ವೈ ಘೋಷಣೆ
ಇನ್ನು ಈ ಬಗ್ಗೆ ನಗರದ ಫ್ರೀಡಂಪಾರ್ಕಿನಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ‘ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗುತ್ತಿರುವುದು ಸಂತೋಷವಾಗಿದೆ. ಜೆಡಿಎಸ್ ಗೆ ನಾಲ್ಕು ಸೀಟ್ ಬಿಟ್ಟು ಕೊಡಲು ಅಮಿತ್ ಶಾ ಒಪ್ಪಿಕೊಂಡಿದ್ದಾರೆ. ಜೆಡಿಎಸ್ ಜತೆಗಿನ ಮೈತ್ರಿಯಿಂದ ನಮಗೆ ಶಕ್ತಿ ಬಂದಿದೆ. 25ಕ್ಕೂ ಹೆಚ್ಚು ಸೀಟ್ ಗೆಲ್ಲಲು ನಮಗೆ ಸಹಾಯ ಆಗುತ್ತೆ’ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿರುವ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ, ‘ಲೋಕಸಭೆ ಮೈತ್ರಿ ದೇವೇಗೌಡರು, ಕುಮಾರಣ್ಣನಿಗೆ ಬಿಟ್ಟ ವಿಚಾರ. ಸೀಟು ಕೊಟ್ರೆ ನಮ್ಮಲ್ಲಿ ಗೆಲ್ತೀವಿ. ನಮ್ಮ ನಾಯಕರಾದ ದೇವೇಗೌಡರು, ಸಿ.ಎಂ ಇಬ್ರಾಹಿಂ, ಕುಮಾರಸ್ವಾಮಿ, ಜಿಟಿ ದೇವೇಗೌಡ ಎಲ್ಲರೂ ಸೇರಿ ಸಭೆ ಮಾಡಿದ್ದೇವೆ. ಎಲ್ಲರೂ ಕೂತು ಪಕ್ಷದ ಬೆಳವಣಿಗೆ ಬಗ್ಗೆ ಚರ್ಚೆ ಮಾಡಿದ್ದೇವೆ. ಸೆ.10 ರಂದು ಅರಮನೆ ಮೈದಾನದಲ್ಲಿ ಸಮಾವೇಶ ಮಾಡ್ತಿದ್ದೇವೆ. ಏನು ಮಾಡಬೇಕು ಅಂತ ಅಲ್ಲಿ ನಿರ್ಧಾರ ಮಾಡ್ತೀವಿ. ಎರಡೂ ರಾಷ್ಟ್ರೀಯ ಪಕ್ಷಗಳನ್ನ ದೂರ ಇಡಬೇಕಾ ಹೇಗೆ ಅಂತ ನಿರ್ಧಾರ ಮಾಡ್ತೀವಿ’ ಎಂದರು.