ಬೆಂಗಳೂರು: ಬಿಜೆಪಿ-ಜೆಡಿಎಸ್ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳಲಿವೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೀಡಿರುವ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಶಾಸಕ ಹೆಚ್.ಡಿ. ರೇವಣ್ಣ, ‘ಲೋಕಸಭೆ ಮೈತ್ರಿ ದೇವೇಗೌಡರು ಹಾಗೂ ಕುಮಾರಣ್ಣನಿಗೆ ಬಿಟ್ಟ ವಿಚಾರ. ನಮಗೆ ಸೀಟು ಕೊಟ್ರೆ ಹಾಸನದಲ್ಲಿ ಗೆಲ್ತೀವಿ. ಜಿಲ್ಲೆಯಲ್ಲಿ ನಮ್ಮ ಪಕ್ಷ ಭದ್ರವಾಗಿದೆ. 60 ವರ್ಷದ ರಾಜಕಾರಣದಲ್ಲಿ ದೇವೇಗೌಡರು ಉತ್ತಮ ಕೆಲಸ ಮಾಡಿದ್ದಾರೆ’ ಎಂದರು.
‘ನಮ್ಮ ನಾಯಕರಾದ ಹೆಚ್.ಡಿ. ದೇವೇಗೌಡರು, ರಾಜ್ಯಾಧ್ಯಕ್ಷರಾದ ಸಿ.ಎಂ ಇಬ್ರಾಹಿಂ, ಹೆಚ್.ಡಿ. ಕುಮಾರಸ್ವಾಮಿ, ಜಿಟಿ ದೇವೇಗೌಡ ಎಲ್ಲರೂ ಸೇರಿ ಸಭೆ ಮಾಡಿದ್ದೇವೆ. ಎಲ್ಲರೂ ಕೂತು ಪಕ್ಷದ ಬೆಳವಣಿಗೆ ಬಗ್ಗೆ ಚರ್ಚೆ ಮಾಡಿದ್ದೇವೆ. 10ರಂದು ಅರಮನೆ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಏನು ಮಾಡಬೇಕು ಎಂದು ನಿರ್ಧಾರ ಮಾಡ್ತೀವಿ. ಎರಡೂ ರಾಷ್ಟ್ರೀಯ ಪಕ್ಷಗಳನ್ನ ದೂರ ಇಡಬೇಕಾ ಹೇಗೆ ಅಂತ ನಿರ್ಧಾರ ಮಾಡ್ತೀವಿ’ ಎಂದರು.
‘ದೇವೇಗೌಡರು ಹಾಗೂ ಅಮಿತ್ ಶಾ ಭೇಟಿಯಾಗಿರುವ ವಿಚಾರ ನನಗೆ ಗೊತ್ತಿಲ್ಲ. ಇನ್ನು ಯಾವುದೇ ತೀರ್ಮಾನ ಮಾಡಿಲ್ಲ. ಮುಂದೆ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಧೃಡಗೊಳಿಸಬೇಕು ಅಂತ ನಿರ್ಧಾರ ಮಾಡಿದ್ದೇವೆ. ಲೋಕಸಭಾ ಚುನಾವಣೆ ಮೈತ್ರಿ ಬಗ್ಗೆ ನನಗೆ ಗೊತ್ತಿಲ್ಲ’ ಎಂದರು.
ಇದನ್ನೂ ಓದಿ; ಕಮಲ-ದಳ ಮೈತ್ರಿ ಸುದ್ದಿ: ‘ಮಾಡಿಕೊಳ್ಳಲಿ ಬಿಡ್ರಿ, ನಮಗೇನು’ ಎಂದ ಸಿಎಂ
ರಾಮನಗರ ಹಾಳಾಗಲು ಕುಮಾರಸ್ವಾಮಿ ಮತ್ತು ಕುಟುಂಬದವರು ಕಾರಣ ಎಂವಬ ಟೀಕೆ ಕುರಿತು ಮಾತನಾಡಿ, ‘ರಾಮನಗರದಲ್ಲಿ ಏನು ಕೆಲಸ ಮಾಡಿದ್ದೇವೆ ಅಂತ ಒಮ್ಮೆ ಅವರು ನೋಡಲಿ. ಸುಪ್ರೀಂ ಕೋರ್ಟ್‌ನಿಂದ ಆದೇಶ ತಂದು ಕೆಲಸ ಮಾಡಿದ್ದು ಕುಮಾರಸ್ವಾಮಿ. ಅವರು ಸಿಎಂ ಆಗಿದ್ದಾಗ ಅನೇಕ ಕೆಲಸ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಅವರೇ ಮೆಡಿಕಲ್ ಎಜುಕೇಶನ್ ಮಿನಿಸ್ಟರ್ ಆಗಿದ್ರು. ಅವರು ಯಾಕೆ ಆಗ ಮೆಡಿಕಲ್ ಕಾಲೇಜು ಮಾಡಿಕೊಳ್ಳಲಿಲ್ಲ. ಚರ್ಚೆಗೆ ಬಂದಾಗ ವಿಧಾನಸಭೆಯಲ್ಲಿ ಉತ್ತರ ಕೊಡ್ತೀವಿ’ ಎಂದು ವಾಗ್ದಾಳಿ ನಡೆಸಿದರು.
‘ನಗರ ಪ್ರದೇಶ ಬಿಟ್ಟು ರಾಜ್ಯದ ಬಹುತೇಕ ಕ್ಷೇತ್ರದಲ್ಲಿ ಮಳೆಯಾಗಿಲ್ಲ. ರೈತರು ವಿಷ ತೆಗೆದುಕೊಳ್ಳುವ ಪರಿಸ್ಥಿತಿಗೆ ಬಂದಿದೆ. ನೀರಾವರಿ ಪ್ರದೇಶದಲ್ಲೂ ಮಳೆ ಇಲ್ಲ, ಕಂದಾಯ ಸಚಿವರು ಪರಿಹಾರ ಘೋಷಣೆ ಮಾಡಬೇಕು. ಹಗರಿಬೊಮ್ಮನಹಳ್ಳಿ ನಮ್ಮ ಶಾಸಕರು ಇಲ್ಲೇ ಇದ್ದಾರೆ. ಅಲ್ಲೂ ಮಳೆಯಾಗಿಲ್ಲ, ಕೂಡಲೇ ಬರ ಅಂತ ಘೋಷಣೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಕೂಡಲೇ ಬರಗಾಲ ಘೋಷಣೆ ಮಾಡಿ, ಕಂದಾಯ ಇಲಾಖೆ ಪರಿಹಾರ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.