ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಹಿನ್ನೆಲೆ ಇಂದು ಸರ್ಕಾರ ಸರ್ವಪಕ್ಷ ಸಭೆ ಕರೆದಿತ್ತು. ಈ ಸಭೆಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಗೈರಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಸಚಿವರಾದ ಹೆಚ್.ಕೆ ಪಾಟೀಲ್, ಕೆ.ಹೆಚ್ ಮುನಿಯಪ್ಪ, ಕೃಷ್ಣ ಬೈರೇಗೌಡ, ನಾರಾಯಣಸ್ವಾಮಿ, ರಾಮಲಿಂಗಾರೆಡ್ಡಿ ಪಾಲ್ಗೊಂಡಿದ್ದರು. ಆದರೆ, ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ, ಮಾಜಿ ಸಿಎಂಗಳಾದ ಹೆಚ್.ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಬಿ.ಎಸ್ ಯಡಿಯೂರಪ್ಪ, ಎಸ್.ಎಂ ಕೃಷ್ಣ, ಡಿ.ವಿ ಸದಾನಂದಗೌಡ ಸಭೆಗೆ ಗೈರಾಗಿದ್ದರು.


ವಿಪಕ್ಷಗಳಿಂದ ಜನಾರ್ಧನ ರೆಡ್ಡಿ, ಸಂಸದರಾದ ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್, ಪಿ.ಸಿ ಮೋಹನ್, ಲೆಹರ್ ಸಿಂಗ್ ಹಾಗೂ ಕಾವೇರಿ ಜಲಾನಯನ ವ್ಯಾಪ್ತಿಯ ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಗೆ ಗೈರಾಗಿರುವ ಬಗ್ಗೆ ಸಭೆ ನಡೆಯುವ ಮೊದಲೇ ಟ್ವೀಟ್ ಮಾಡಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದರಿಂದ ಸರ್ಕಾರ ಕರೆದ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು
ಡಿಕೆಶಿ ವಿರುದ್ಧ ಸುಮಲತಾ ಅಸಮಾಧಾನ : ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಡಿಸಿಎಂ ಹಾಗೂ ನೀರಾವರಿ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನೀರಾವರಿ ಸಚಿವರು ಇದುವರೆಗೆ ಕೆಆರ್ ಎಸ್ ಡ್ಯಾಂ ವೀಕ್ಷಣೆಗೆ ಬಂದಿಲ್ಲ. ಸ್ಥಳೀಯ ಶಾಸಕರು, ಸಂಸದರನ್ನು ಕರೆದು ಸಭೆ ಮಾಡಿಲ್ಲ. ಇಷ್ಟೆಲ್ಲಾ ಸಮಸ್ಯೆ ಆದರೂ, ಸ್ಥಳೀಯರಿಂದ ವರದಿ ಪಡೆದಿಲ್ಲ. ನೀರಾವರಿ ಸಚಿವರು ಯಾಕೆ ಈ ರೀತಿ ಮಾಡ್ತಿದ್ದಾರೆ ಎಂದು ನನಗೆ ಅರ್ಥವಾಗ್ತಿಲ್ಲ ಎಂದರು.


ಆಗಸ್ಟ್ ತಿಂಗಳಲ್ಲಿ ಸರ್ವಪಕ್ಷ ಸಭೆ ಕರೆದು, ಎಲ್ಲರ ಸಲಹೆ ಸೂಚನೆ ಪಡೆದು ನೀರು ಬಿಡಬೇಕಾ, ಬೇಡ್ವಾ? ಎಂಬ ತಿರ್ಮಾನ ಮಾಡಬೇಕಿತ್ತು. ಅಂದೇ ತಿರ್ಮಾನ ತೆಗೆದುಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಮಂಡ್ಯದಲ್ಲಿ ಈಗಾಗಲೇ ಅರ್ಧ ಬೆಳೆ ನಾಶ ಆಗಿದೆ. ರೈತರಿಗೆ ಯಾವಾಗ ಪರಿಹಾರ ಸಿಗಲಿದೆ ಎಂಬ ಕ್ಲಾರಿಟಿ ಸಿಗುತ್ತಿಲ್ಲ. ಕಾವೇರಿ ಪ್ರಾಧಿಕಾರಕ್ಕೆ ನಮ್ಮ ಸಮಸ್ಯೆ ಮನವರಿಕೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.