ಮೈಸೂರು: ನಮ್ಮ ಯೋಜನೆಗಳಿಗೆ ಬಿಜೆಪಿ ಅವರು ಸುಣ್ಣಬಣ್ಣ ಹಾಕುತ್ತಾರಷ್ಟೇ, ಅವರು ಯಾವುದೇ ಯೊಜನೆ ಜಾರಿ ಮಾಡಲ್ಲ, ಬಡವರ ಮೇಲೆ ಅವರಿಗೆ ಕಾಳಜಿ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ. ಮನೆ ಯಜಮಾನಿಗೆ ಮಾಸಿಕ 2 ಸಾವಿರ ರೂಪಾಯಿ ನೀಡುವ ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ಬಳಿಕ ಸಾರ್ವಜನಿಕರ ಉದ್ದೇಶಿಸಿ ಅವರು ಮಾತನಾಡಿದ್ದಾರೆ.
ನಮ್ಮ 5 ಗ್ಯಾರಂಟಿ ಯೋಜನೆಗಳಿಗೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಟೀಕೆ ಮಾಡಿದ್ದರು. ಈ ಯೋಜನೆಗಳಿಂದ ರಾಜ್ಯ-ದೇಶ ದಿವಾಳಿಯಾಗಲಿದೆ ಎಂದಿದ್ದರು. ಆದ್ರೆ ನಾವು ಎಲ್ಲಾ ಗ್ಯಾರಂಟಿಗಳ ಅನುಷ್ಠಾನಕ್ಕೆ ತಂದಿದ್ದೇವೆ ಎಂದರು.
ಇದನ್ನೂ ಓದಿ: ದೇಶದ ಅತೀದೊಡ್ಡ ಯೋಜನೆಯಿದು; ‘ಗೃಹಲಕ್ಷ್ಮಿ’ಗೆ ಚಾಲನೆ ನೀಡಿ ರಾಹುಲ್ ಭಾಷಣ
ಕೇಂದ್ರ ಸರ್ಕಾರದಿಂದ ಜನ ಏನನ್ನೂ ನಿರೀಕ್ಷಿಸುತ್ತಿಲ್ಲ. ನೀವೆಲ್ಲಾ ಮನಸ್ಸು ಮಾಡಿದರೆ ಸರ್ವಾಧಿಕಾರಿ ಸರ್ಕಾರವನ್ನು ಒದ್ದು ಓಡಿಸಬಹುದು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೋದಿ ಸರ್ ನೇಮ್ ಇರುವವರು ಮಾಡಿರುವ ಭ್ರಷ್ಟಾಚಾರ ಪ್ರಸ್ತಾಪಿಸಿದ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಲಾಯಿತು. ರಾಹುಲ್ ಗಾಂಧಿಯವರನ್ನು ಸಂಸತ್ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಲಾಯಿತು. ಆದರೆ ನ್ಯಾಯಾಲಯದಿಂದ ರಾಹುಲ್‌ಗೆ ನ್ಯಾಯ ಸಿಕ್ಕಿತು. ಮೋದಿ ಉಪನಾಮದ ಹೊಂದಿದ ಬಹಳಷ್ಟು ಮಂದಿ ಕರ್ನಾಟಕದಲ್ಲೂ ಇದ್ದಾರೆ. ದೇಶವನ್ನು ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಇದನ್ನೂ ಓದಿ: ಶಾಲಾ ಬಾಲಕಿಯರೊಂದಿಗೆ ರಕ್ಷಾ ಬಂಧನ ಆಚರಿಸಿದ ಪ್ರಧಾನಿ ಮೋದಿ
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಡಿಜಿಟಲ್ ಬಟನ್ ಒತ್ತುವ ಮೂಲಕ ಯೋಜನೆ ಲೋಕಾರ್ಪಣೆ ಮಾಡಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 10 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಡಿಜಿಟಲ್ ಕಾರ್ಡ್ ವಿತರಿಸಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಗೃಹ ಸಚಿವ ಡಾ.ಜಿ ಪರಮೇಶ್ವರ್, ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಹೆಚ್.ಸಿ ಮಹದೇವಪ್ಪ ಉಪಸ್ಥಿತರಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.