ಬೆಂಗಳೂರು : ವಿಧಾನಸಭಾ ಚುನಾವಣೆಯಲ್ಲಿ ಸೋತು ಸೈಲೆಂಟ್ ಆಗಿದ್ದ ರಾಜ್ಯ ಬಿಜೆಪಿ ನಾಯಕರು ಇದೀಗ ಅಲರ್ಟ್ ಆಗಿದ್ದು, ಲೋಕಸಭಾ ಚುನಾವಣೆ ಎದುರಿಸಲು ತಯಾರಿಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಇಂದು ಮಹತ್ವದ ಸಭೆ ಕರೆಯಲಾಗಿದೆ.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ರಾಜ್ಯ ಬಿಜೆಪಿ ನಾಯಕರ ಮಹತ್ವದ ಸಭೆ ನಡೆಯಲಿದೆ. ‘ಮತದಾರರ ಮಹಾಚೇತನ ಅಭಿಯಾನ’ದ ಕುರಿತು ಸಭೆ ಕರೆಯಲಾಗಿದೆ ಎನ್ನಲಾಗಿದ್ದು ಪಕ್ಷ ಸಂಘಟನೆ, ಲೋಕಸಭೆ ಚುನಾವಣೆಗೆ ಸಿದ್ದತೆಯ ಕುರಿತು ಚರ್ಚೆ ನಡೆಯಲಿದೆ. ಸಭೆಗೆ ಬಿಜೆಪಿಯ ಸಂಸದರು, ಶಾಸಕರು, ಪರಿಷತ್ ಸದಸ್ಯರು ಮತ್ತು ಜಿಲ್ಲಾಧ್ಯಕ್ಷರಿಗೆ ಆಹ್ವಾನ ನೀಡಲಾಗಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿ.ಟಿ ರವಿ ಸೇರಿದಂತೆ ಕೇಸರಿ ನಾಯಕರು ಭಾಗಿಯಾಗಲಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಪೂರ್ವನಿಗದಿತ ಕಾರ್ಯಕ್ರಮದಂತೆ ಸಭೆಗೆ ಗೈರಾಗಲಿದ್ದಾರೆ.
ಇದನ್ನೂ ಓದಿ : ʼವಿಧಾನಸಭೆ ಚುನಾವಣೆ ನಂತ್ರ ಬಿಜೆಪಿಯವರಿಗೆ ಜನರ ನೆನಪಾಗಿದೆʼ
ಸಭೆಯಲ್ಲಿ ಲೋಕಸಭಾ ಚುನಾವಣೆಯ ಸಿದ್ದತೆ, ಮೋದಿ ವರ್ಚಸ್ಸು, ಕೇಂದ್ರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವುದು, ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಮುಂದೆ ಬಿಜೆಪಿ ಬಗ್ಗೆ ಪ್ರಚಾರ ಹೆಚ್ಚಿಸುವುದು, ಪ್ರಸ್ತುತ ವಿಷಯಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಮತ್ತು ಪಕ್ಷ ಸಂಘಟನೆಯ ಕುರಿತು ಶಾಸಕರು, ಸಂಸದರಿಗೆ ಬಿ.ಎಲ್ ಸಂತೋಷ್ ಸೂಚನೆ ನೀಡಲಿದ್ದಾರೆ.
ಏನಿದು ಮತದಾರರ ಮಹಾಚೇತನ ಅಭಿಯಾನ?
ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಬಿಜೆಪಿ, ಮತದಾರರ ಪಟ್ಟಿ ಮೇಲೆ ಕಣ್ಣಿಡಲು ಪ್ಲಾನ್ ಮಾಡಿದೆ. ಪಟ್ಟಿ ಫೈನಲ್ ಮಾಡಿ ಬಿಜೆಪಿಗೆ ಮತ ಹೆಚ್ಚಿಸುವ ತಂತ್ರ ಹೆಣೆದಿದೆ. ಈ ನಿಟ್ಟಿನಲ್ಲಿ ಸೆಪ್ಟೆಂಬರ್ 1ರಿಂದ ‘ಮತದಾರರ ಮಹಾಚೇತನ ಅಭಿಯಾನ ಹಮ್ಮಿಕೊಂಡಿದೆ.
ಈ ಅಭಿಯಾನದಡಿ ಪ್ರತಿ ಗ್ರಾಮಕ್ಕೂ ಬಿಜೆಪಿ ಬಿಎಲ್ಓಗಳ ನೇಮಕ ಮಾಡಲಿದೆ. ಬಿಎಲ್‌ಓಗಳು ಆಯ ಗ್ರಾಮದಲ್ಲಿನ ಮತದಾರರ ಪಟ್ಟಿ ಪರಿಶೀಲಿಸಲಿದ್ದಾರೆ. ನಿಧನ ಹೊಂದಿದವರ ಹೆಸರನ್ನು ಮತದಾರ ಪಟ್ಟಿಯಿಂದ ಕೈ ಬಿಡುವುದು,18 ವರ್ಷ ತುಂಬಿದವರನ್ನು ಮತದಾರರ ಪಟ್ಟಿಗೆ ಸೇರಿಸುವುದು, ಎರಡು ಕಡೆ ಇರುವ ಹೆಸರು ತೆಗೆಸುವುದು ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಲಿದ್ದಾರೆ. ಅಭಿಯಾನದ ಪೂರ್ವಭಾವಿಯಾಗಿ ಇಂದು ಸಭೆ ಕರೆಯಲಾಗಿದೆ. ಸಭೆಯಲ್ಲಿ ಬಿಜೆಪಿ ನಾಯಕರಿಗೆ ಬಿ.ಎಲ್ ಸಂತೋಷ್ ಟಾಸ್ಕ್ ನೀಡಲಿದ್ದಾರೆ.
ವರದಿ : ಮಲ್ಲೇಶ್
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.