ಕಲಬುರಗಿ : ವಿಧಾನಸಭಾ ಚುನಾವಣೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರನ್ನು ಇಂದು ಬೆಳಿಗ್ಗೆ ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸ್ ಇಲಾಖೆಯ ವಿರುದ್ಧ ಸುಳ್ಳು ಸುದ್ದಿ ಹಬ್ಬಿದ ಆರೋಪದ ಮೇಲೆ ರಾಠೋಡ್ ಅವರನ್ನು ನಗರದ ಅಪಾರ್ಟ್ ಮೆಂಟ್ ನಿಂದ ಬಂಧಿಸಲಾಗಿದೆ.
ಚಿತ್ತಾಪುರ ತಾಲೂಕಿನ ಕಲಗುರ್ತಿ ಗ್ರಾಮದ ದೇವಾನಂದ ರಾಮಚಂದ್ರಪ್ಪ ಕೊರಬಾ ಅವರ ಸಾವಿನ ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಆರೋಪಿಗಳು ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರಾಗಿದ್ದು, ಹಾಗಾಗಿ ಪೊಲೀಸರು ಬಂಧಿಸುತ್ತಿಲ್ಲ. ಪೊಲೀಸರು ಸಚಿವರ ಕೈಗೊಂಬೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಣಿಕಂಠ ರಾಠೋಡ್ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ : ಪೌರ ಕಾರ್ಮಿಕರಿಗೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ಹಣವಿಲ್ಲವೇ: ಜೆಡಿಎಸ್
ಈ ಹಿನ್ನೆಲೆ ರಾಠೋಡ್ ವಿರುದ್ಧ ಚಿತ್ತಾಪುರ ತಾಲೂಕಿನ ಮಾಡಬೂಳ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153 ಎ 505 (1)ಬಿ ಅಡಿ ಕೇಸ್ ದಾಖಲಾಗಿತ್ತು.
ದೇವಾನಂದ ರಾಮಚಂದ್ರಪ್ಪ ಅವರ ಸಾವಿನ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಚಿತ್ತಾಪುರ ಪಟ್ಟಣದಲ್ಲಿ ಮಣಿಕಂಠ ರಾಠೋಡ್ ಬೆಂಬಲಿಗರೊಂದಿಗೆ ಇಂದು ಪ್ರತಿಭಟನೆ ಹಮ್ಮಿಕೊಂಡಿದ್ದರು. ಅದಕ್ಕೂ ಮುನ್ನ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : ‘ಇದು ಸರ್ವಪಕ್ಷಗಳ ಸಭೆಯಲ್ಲ, ರಾಜ್ಯವನ್ನು ಲೂಟಿ ಹೊಡೆದಿರುವ ಪಕ್ಷಗಳ ಸಭೆ’
ರೌಡಿ ಶೀಟರ್ ಆಗಿರುವ ಮಣಿಕಂಠ ರಾಠೋಡ್ ವಿರುದ್ಧ ಕರ್ನಾಟಕ, ತೆಲಂಗಾಣ ಸೇರಿದಂತೆ ವಿವಿದೆಡೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಿಂದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರಾಠೋಡ್, ಸೋಲು ಅನುಭವಿಸಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.