ಬೆಂಗಳೂರು : ರಾಜ್ಯದಲ್ಲಿ ಆಪರೇಷನ್ ಹಸ್ತದ ವಿಚಾರ ಜೋರಾಗಿ ಚರ್ಚೆಯಾಗುತ್ತಿರುವ ನಡುವೆ, ಬಿಜೆಪಿಯ ಹಿರಿಯ ನಾಯಕ ದಿ.ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ಮುಂದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಕಾಂಗ್ರೆಸ್ ತಂತ್ರ ಹೆಣೆಯುತ್ತಿದೆ. ಈ ನಡುವೆ ಇಂದು ಮಧ್ಯಾಹ್ನ1:30ಕ್ಕೆ ಕುಮಾರಕೃಪಾ ಅತಿಥಿ ಗೃಹದಲ್ಲಿ ತೇಜಸ್ವಿನಿ ಆನಂತ್ ಕುಮಾರ್ ಡಿಕೆಶಿಯನ್ನು ಭೇಟಿಯಾಗಲಿದ್ದಾರೆ.
ಕೈ ಹಿಡೀತಾರಾ ತೇಜಸ್ವಿನಿ? : ಕಾಂಗ್ರೆಸ್ ಆಪರೇಷನ್ ಹಸ್ತದ ಮೂಲಕ ಅನೇಕ ಬಿಜೆಪಿ ನಾಯಕರನ್ನು ತಮ್ಮತ್ತ ಸೆಳೆಯಲು ತಂತ್ರ ಹೆಣೆಯುತ್ತಿದೆ ಎಂಬ ಗುಮಾನಿ ಹಲವು ದಿನಗಳಿಂದ ಕೇಳಿ ಬರುತ್ತಿದೆ. ಕಾಂಗ್ರೆಸ್-ಜೆಡಿಎಸ್ ನಿಂದ ಬಿಜೆಪಿಗೆ ಹಾರಿರುವ 17 ಮಂದಿ ಮತ್ತು ಬಿಜೆಪಿಯ ಹೈಕಮಾಂಡ್ ನಾಯಕರ ವಿರುದ್ಧ ಮುನಿಸಿಕೊಂಡಿರುವ ಕೆಲವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಲಾಗ್ತಿದೆ.
ತೇಜಸ್ವಿನಿ ಅನಂತ್ ಕುಮಾರ್ ಕೂಡ ಒಂದು ರೀತಿ ಬಿಜೆಪಿಯ ಅಸಮಾಧಾನಿತರು ಎಂದೇ ಹೇಳಬಹುದು. ಯಾಕೆಂದರೆ ಅನಂತ್ ಕುಮಾರ್ ಅವರ ನಿಧನದ ಬಳಿಕ ತೇಜಸ್ವಿನಿ ಅವರಿಗೆ ಬಿಜೆಪಿಗೆ ಯಾವುದೇ ಅವಕಾಶ ಕೊಟ್ಟಿಲ್ಲ. 2019ರ ಲೋಕಸಭೆ ಚುನಾವಣೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತ್ ಕುಮಾರ್ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಆದರೆ, ಬಿಜೆಪಿ ಹೈಕಮಾಂಡ್ ತೇಜಸ್ವಿನಿ ಬದಲಿಗೆ ತೇಜಸ್ವಿ ಸೂರ್ಯಗೆ ಟಿಕೆಟ್ ಕೊಟ್ಟಿತ್ತು. 5 ವರ್ಷಗಳ ಬಳಿಕ ಮತ್ತೆ ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಈ ಹಿನ್ನೆಲೆ ಕಾಂಗ್ರೆಸ್ ಟಿಕೆಟ್ ಕೇಳಲು ತೇಜಸ್ವಿನಿ ಅವರು ಡಿಕೆಶಿಯನ್ನು ಭೇಟಿಯಾಗ್ತಿದ್ದಾರಾ? ಇಲ್ಲ, ಡಿಕೆಶಿಯನ್ನು ಭೇಟಿಯಾಗುವ ಮೂಲಕ ಟಿಕೆಟ್ ಕೊಡದಿದ್ದರೆ ಕಾಂಗ್ರೆಸ್ ಸೇರುತ್ತೇನೆ ಎಂದು ಬಿಜೆಪಿಗ ಪರೋಕ್ಷ ಸಂದೇಶ ಸಾರಲು ಮುಂದಾಗಿದ್ದಾರಾ? ಎಂಬ ಪ್ರಶ್ನೆ ಎದ್ದಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.