ಆನೇಕಲ್: ಬಿಜೆಪಿ ಮಾಜಿ ಸಚಿವ ದಿ.ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರು ಲೋಕಸಭೆಗೆ ಸ್ಪರ್ಧಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಈ ಬಗ್ಗೆ ಮಾತನಾಡಿರುವ ತೇಜಸ್ವಿನಿ ಅವರು, ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧೆ ಮಾಡುವ ಬಗ್ಗೆ ಸಮಯ ಬಂದಾಗ ಎಲ್ಲವನ್ನೂ ತಿಳಿಸುತ್ತೇನೆ ಎಂದು ಕುತೂಹಲ ಮೂಡಿಸಿದ್ದಾರೆ.
ಆನೇಕಲ್‌ನ ಮುತ್ತಾನಲ್ಲೂರಿನ ದೇವರ ಕೆರೆಯಲ್ಲಿ ಅದಮ್ಯ ಚೇತನ ಸಂಸ್ಥೆಯಿಂದ ಹಮ್ಮಿಕೊಂಡಿದ್ದ 401 ನೇ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ತೇಜಸ್ವಿನಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ಈಗ ಏನನ್ನೂ ಹೇಳಲು ಸಾಧ್ಯವಿಲ್ಲ, ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದು ಲೋಕಸಭೆ ಸ್ಪರ್ಧೆಯ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: ನಾನು ಯಾವತ್ತೂ ಪಕ್ಷದ ಟಿಕೆಟ್ ಕೇಳಿಲ್ಲ: ತೇಜಸ್ವಿನಿ ಅನಂತಕುಮಾರ್
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ತೇಜಸ್ವಿನಿ ಅವರು ಕಾಂಗ್ರೆಸ್ ಸೇರುತ್ತಾರೆ ಎಂದು ಸುದ್ದಿ ಹಬ್ಬಿತ್ತು. ಆದರೆ, ತೇಜಸ್ವಿನಿ ಅವರು ಕಾಂಗ್ರೆಸ್ ಸೇರ್ಪಡೆ ಸುದ್ದಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದರು.
ಕೆಲ ದಿನಗಳಿಂದ ರಾಜ್ಯ ಬಿಜೆಪಿಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಬಿಜೆಪಿಯ ನಡೆಗಳಿಂದ ನೊಂದಿದ್ದಾರಾ? ಬಿಜೆಪಿ ಬಿಟ್ಟು ಬೇರೊಂದು ಪಕ್ಷಕ್ಕೆ ಹಾರುತ್ತಾರಾ ಎನ್ನವ ರೀತಿಯ ಊಹಾಪೋಹಗಳು ಹರಿದಾಡುತ್ತಿದ್ದವು. ಅವೆಲ್ಲದ್ದಕ್ಕೂ ಅವರು ಟ್ವೀಟ್ ಮೂಲಕ ಬ್ರೇಕ್ ಹಾಕಿದ್ದರು.
ಈ ಸಂಬಂಧ ಟ್ವೀಟ್ ಮಾಡಿದ್ದ ಅವರು ದಯವಿಟ್ಟು ಊಹಾಪೋಹಗಳಿಗೆ ಕಿವಿಗೊಡಬೇಡಿ. ನಾನು ಭಾರತೀಯ ಜನತಾ ಪಕ್ಷದ ಜೊತೆಗೆ ಧೃಡವಾಗಿ ಇದ್ದೇನೆ ಎಂದು ಸ್ಪಷ್ಟಪಡಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.