ಬೆಂಗಳೂರು: ರಾಜ್ಯದಲ್ಲಿ ಆಪರೇಷನ್ ಹಸ್ತದ ವಿಚಾರ ಜೋರಾಗಿ ಚರ್ಚೆಯಾಗುತ್ತಿರುವ ನಡುವೆ, ಬಿಜೆಪಿಯ ಹಿರಿಯ ನಾಯಕ ದಿ.ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.
ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರಾದ ತೇಜಸ್ವಿನಿ ಅನಂತಕುಮಾರ್, ಕುಮಾರಕೃಪಾ ಅತಿಥಿ ಗೃಹದಲ್ಲಿ ಡಿಕೆಶಿ ಅವರ ಭೇಟಿ ಮಾಡಿದ್ದಾರೆ. ಈ ವೇಳೆ ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ಅದಮ್ಯ ಚೇತನ ಸಂಸ್ಥೆ ಮೂಲಕ ಇಂದಿರಾ ಕ್ಯಾಂಟೀನ್ ಹಾಗೂ ಪೌರ ಕಾರ್ಮಿಕರಿಗೆ ಊಟ ಸರಬರಾಜು ಮಾಡಲಾಗಿತ್ತು. ಈ ಸಂಬಂಧ ಬಾಕಿ ಇರುವ ಬಿಲ್‌ನ ಹಣ ಬಿಡುಗಡೆ ಸಂಬಂಧ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದರ ಜೊತೆ ಅನಂತ್‌ಕುಮಾರ್ @64 ಕಾರ್ಯಕ್ರಮಕ್ಕೆ ಆಗಮಿಸುವಂತೆ ಉಪಮುಖ್ಯಮಂತ್ರಿಗೆ ಆಹ್ವಾನ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕಾವೇರಿ ಪ್ರತಿಮೆಗೆ ಕ್ಷೀರಾಭಿಷೇಕ ಮಾಡಿ ಸರ್ಕಾರದ ವಿರುದ್ಧ ಕನ್ನಡಪರ ಹೋರಾಟಗಾರರ ಆಕ್ರೋಶ!
ಭೇಟಿ ಹಿಂದಿದ್ಯಾ ಆಪರೇಷನ್ ಗುಟ್ಟು?
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಕಾಂಗೆಸ್ ತಂತ್ರ ಹೆಣೆಯುತ್ತಿದೆ. ಈ ನಡುವೆ ಹಲವು ನಾಯಕರಿಗೆ ಕಾಂಗ್ರೆಸ್ ಗಾಳ ಹಾಕಿದೆ. ಈ ನಡುವೆ ತೇಜಸ್ವಿನಿ ಅನಂತ್ ಕುಮಾರ್ ಸಹ ಕಾಂಗ್ರೆಸ್ ಸೇರುತ್ತಾರಾ ಎಂಬ ಗುಮಾನಿ ಎದ್ದಿದೆ.
ತೇಜಸ್ವಿನಿ ಅನಂತ್ ಕುಮಾರ್ ಕೂಡ ಒಂದು ರೀತಿ ಬಿಜೆಪಿಯ ಅಸಮಾಧಾನಿತರು ಎಂದೇ ಹೇಳಬಹುದು. ಯಾಕೆಂದರೆ ಅನಂತ್ ಕುಮಾರ್ ಅವರ ನಿಧನದ ಬಳಿಕ ತೇಜಸ್ವಿನಿ ಅವರಿಗೆ ಬಿಜೆಪಿಗೆ ಯಾವುದೇ ಅವಕಾಶ ಕೊಟ್ಟಿಲ್ಲ. 2019ರ ಲೋಕಸಭೆ ಚುನಾವಣೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತ್ ಕುಮಾರ್ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಇದನ್ನೂ ಓದಿ: 61 ಯೋಜನೆಗಳಿಗೆ ಬಿಡಿಗಾಸು ಬಿಡುಗಡೆ ಮಾಡದ ಕೇಂದ್ರ
ಆದರೆ, ಬಿಜೆಪಿ ಹೈಕಮಾಂಡ್ ತೇಜಸ್ವಿನಿ ಬದಲಿಗೆ ತೇಜಸ್ವಿ ಸೂರ್ಯಗೆ ಟಿಕೆಟ್ ಕೊಟ್ಟಿತ್ತು. 5 ವರ್ಷಗಳ ಬಳಿಕ ಮತ್ತೆ ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಈ ಹಿನ್ನೆಲೆ ಡಿಕೆ ಶಿವಕುಮಾರ್ ಭೇಟಿ ನೆಪದಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಬೇಡಿಕೆ ಇಟ್ಟಿದ್ದಾರಾ? ಎಂಬ ಅನುಮಾನ ಹುಟ್ಟಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.