Sunday, September 24, 2023
spot_img
- Advertisement -spot_img

‘ಯಡಿಯೂರಪ್ಪ ಪಾಪ.. ರಾಜಕೀಯಕ್ಕಾಗಿ ನಮ್ಮ ಮೇಲೆ ಆರೋಪ ಮಾಡ್ತಿದ್ದಾರೆ’

ಕಲಬುರಗಿ : ಐದು ಗ್ಯಾರಂಟಿಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಆಗಿಲ್ಲವಾ? ಯಾವ ಸರ್ಕಾರ 1 ಕೋಟಿ 13 ಲಕ್ಷ ಜನರಿಗೆ ಎರಡು ಸಾವಿರ ರೂಪಾಯಿ ಕೊಟ್ಟಿದೆ? ಬಿಜೆಪಿಯವರ ಕಾಲದಲ್ಲಿ 7 ಕೆ.ಜಿ. ಬದಲು ಐದು ಕೆ.ಜಿ. ಕೊಟ್ಟಿದ್ದಾರೆ. ಮಿಸ್ಟರ್ ಯಡಿಯೂರಪ್ಪ ಅವರು 600 ಭರವಸೆಗಳನ್ನು ಕೊಟ್ಟು ಅದರಲ್ಲಿ 10% ಭರವಸೆಗಳನ್ನು ಈಡೇರಿಸಿಲ್ಲ. ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿ ಯಡಿಯೂರಪ್ಪ ಸಾಲಮನ್ನಾ ಮಾಡಿದ್ಧಾರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಐದು ಗ್ಯಾರಂಟಿಗಳ ಗುಂಗಿನಲ್ಲಿದೆ, ಅಭಿವೃದ್ಧಿ ಆಗುತ್ತಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆಗೆ ನಗರದಲ್ಲಿಂದು ಪ್ರತಿಕ್ರಿಯೆ ನೀಡಿದ ಅವರು, ಯಾವ ಸರ್ಕಾರ ಕೋಟ್ಯಾಂತರ ಜನರಿಗೆ ಎರಡು ಸಾವಿರ ರೂಪಾಯಿ ಕೊಟ್ಟಿದೆ ಹೇಳಿ? ಬಿಜೆಪಿಯವರು ಸಾಲಮನ್ನಾ ಮಾಡುವುದಾಗಿ ಹೇಳಿ ಮಾಡಲಿಲ್ಲ, ಅವರು ಕೇವಲ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.

ಇದನ್ನೂ ಓದಿ : ‘ವಿಶ್ವಕರ್ಮ’ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಯಡಿಯೂರಪ್ಪ ಕಾಲದಲ್ಲೂ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ಎಲ್ಲರ ಕಾಲದಲ್ಲೂ ಕಾವೇರಿ ನೀರು ಹರಿಸಿದ್ದಾರೆ. ನಾವು 37.7 ಟಿಎಂಸಿ ನೀರು ಬಿಟ್ಟಿದ್ದೇವೆ, 99 ಟಿಎಂಸಿ ನೀರನ್ನು ಇನ್ನೂ ಬಿಡಬೇಕಾಗಿತ್ತು. ಆದರೆ ನಾನು ನೀರು ಬಿಟ್ಟಿಲ್ಲ, ನೀರು ಬಿಡಲು ನಮ್ಮ ಹತ್ತಿರ ನೀರು ಇಲ್ಲ. ಸುಪ್ರೀಂಕೋರ್ಟ್ ಗೆ ಹೋಗುತ್ತಿದ್ದೇವೆ. ನೀರು ಕೊಡಬೇಕೆಂಬ ಭಾವನೆ ನಮಗೂ ಇಲ್ಲ ಎಂದು ತಿಳಿಸಿದರು.

ಅವರಿಗೆ ಬಿಡುಗಡೆ ಮಾಡಲು ನಮ್ಮ ಜಲಾಶಯಗಳಲ್ಲಿ 106 ಟಿಎಂಸಿ ನೀರು ಬೇಕು. ಅಲ್ಲದೆ ಕುಡಿಯಲು 30 ಟಿಎಂಸಿ ನೀರಿನ ಅವಶ್ಯಕತೆ ಇದೆ. ಬೆಳೆ ಉಳಿಸಿಕೊಳ್ಳಲು 70 ಟಿಎಂಸಿ ನೀರು ಬೇಕು, ಕೈಗಾರಿಕೆಗೆ 3 ಟಿಎಂಸಿ ನೀರು ಬೇಕಾಗಿದೆ. ಆದರೆ ಪಾಪ ಯಡಿಯೂರಪ್ಪ ಇದನ್ನೆಲ್ಲ ಕೇವಲ ರಾಜಕೀಯ ಮಾಡಬೇಕೆಂದಷ್ಟೇ ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.

ಬೆಳೆ ಪರಿಹಾರ ಕೊಡುತ್ತೇವೆ, ಈಗಾಗಲೆ ಆದೇಶ ಹೊರಡಿಸಿದ್ದೇವೆ

ರಾಜ್ಯದಲ್ಲಿ ರೈತರಿಗೆ ಬೆಳೆ ಪರಿಹಾರ ವಿತರಿಸುತ್ತೇವೆ, ಈಗಾಗಲೆ ಆದೇಶ ಹೊರಡಿಸಿದ್ದೇವೆ. ನರೇಗಾದಲ್ಲಿ 150 ದಿನ ಉದ್ಯೋಗ ನೀಡಬೇಕು. ಕುಡಿಯುವ ನೀರಿಗೆ ತೊಂದರೆ ಆಗಬಾರದು. ಸದ್ಯ ಮೇವಿನ ಕೊರತೆ ಇಲ್ಲ. ಈಗಾಗಲೆ 161 ತಾಲ್ಲೂಕುಗಳು ತೀವ್ರ ಬರಗಾಲಕ್ಕೆ ತುತ್ತಾಗಿವೆ. 35 ತಾಲ್ಲೂಕುಗಳು ಸಾಧಾರಣ ಬರ ಪೀಡಿತಕ್ಕೆ ತುತ್ತಾಗಿವೆ. ಒಟ್ಟು 195 ಬರ ಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಿದ್ದೇವೆ. ಒಟ್ಟಾರೆಯಾಗಿ ಬೆಳೆ ಪರಿಹಾರ, ನೀರು ಹಾಗೂ ಉದ್ಯೋಗ ಒದಗಿಸಿ ಜನರು ಗುಳೆ ಹೋಗುವುದನ್ನು ತಡೆಯುತ್ತೇವೆ ಎಂದು ತಿಳಿಸಿದರು.

ನಾನು ಬರದ ವಿಚಾರದಲ್ಲಿ ಕೇಂದ್ರಕ್ಕೆ ಪತ್ರ ಬರೆದು, ಎನ್ ಡಿ ಆರ್ ಎಫ್ ನಿಯಮಗಳಲ್ಲಿ ಬದಲಾವಣೆ ತರಬೇಕೆಂದು ಮನವಿ ಮಾಡಿದ್ದೇನೆ. ಅದರಲ್ಲಿ ಪ್ರಧಾನಿಗಳ ಭೇಟಿಗೆ ಸಮಯವನ್ನು ಕೇಳಿ, ಸರ್ವ ಪಕ್ಷದವರು ನಿಯೋಗದೊಂದಿಗೆ ಬರುತ್ತೇವೆ ಎಂದು ತಿಳಿಸಿದ್ದೇನೆ. ಆದರೂ ಈ ವರೆಗೆ ಸಮಯ ಕೊಡಲಿಲ್ಲ, ಮತ್ತೆ ಕೇಂದ್ರಕ್ಕೆ ಪತ್ರ ಬರೆಯುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ : ಮೋದಿ ಜನ್ಮದಿನ : ಪೌರ ಕಾರ್ಮಿಕರ ಪಾದ ಪೂಜೆ ಮಾಡಿದ ಪ್ರತಾಪ್ ಸಿಂಹ

ಕೇಂದ್ರದ ಅಧ್ಯಯನ ತಂಡದ ಬರ ಅಧ್ಯಯನ ತಂಡದ ವರದಿಯ ಆಧಾರದ ಮೇಲೆ ಪರಿಹಾರ ನೀಡಲಾಗುತ್ತದೆ. ನಾವು ಎಷ್ಟು ಪರಿಹಾರ ಕೇಳಬೇಕು ಎಂದು ಪತ್ರದ ಮುಖೇನ ಕೇಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.

ಕಲ್ಯಾಣ ಕರ್ನಾಟಕದಲ್ಲಿ ಮುಂದಿನ ಸಚಿವ ಸಂಪುಟ ಸಭೆ..

ಮುಂದಿನ ದಿನಗಳಲ್ಲಿ ಕಲಬುರಗಿಯಲ್ಲಿ ಸಚಿವ ಸಂಪುಟದ ಸಭೆ ಮಾಡುತ್ತೇವೆ. ಸಭೆ ಮಾಡುವುದು ಮುಖ್ಯವಲ್ಲ, ಇಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದದ್ದು ಮುಖ್ಯವಾಗಿದೆ. ಹೀಗಾಗಿ ಈ ಕುರಿತ ನೀಲಿ ನಕ್ಷೆ ಸಿದ್ದಪಡಿಸುವಂತೆ ತಿಳಿಸಿದ್ದೇನೆ ಎಂದರು.

ನಾವು ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುತ್ತೇವೆ. ಧರ್ಮ, ಮನುಷ್ಯ ಒಳಿತಿಗಾಗಿ ಇರುವುದು. ದಯವೇ ಧರ್ಮದ ಮೂಲವಯ್ಯ, ದಯವಿಲ್ಲದ ಧರ್ಮ ಯಾವುದಯ್ಯ ಎಂದು ಬಸವಣ್ಣ ಅವರು ಹೇಳಿದ್ದಾರೆ ಎಂದು ಬಸವಣ್ಣನವರ ವಚನ ಪಠಿಸಿ, ಧರ್ಮದಲ್ಲಿ ದಯೆ ಇರಬೇಕು, ಧರ್ಮ ಅಂದ್ರೆ ಮನುಷ್ಯತ್ವ ಇರಬೇಕು ಎಂದು ಮಾರ್ಮಿಕವಾಗಿ ಸಿದ್ದರಾಮಯ್ಯ ನುಡಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles