ಮಂಡ್ಯ : ಬಿಜೆಪಿ ನಾಯಕರು ಬರೀ ಷೋ ಅಫ್ ರಾಜಕಾರಣಕ್ಕಾಗಿ ಕೆಆರ್‌ಎಸ್ ಡ್ಯಾಂ ವೀಕ್ಷಣೆ ಮಾಡಲು ಬರುತ್ತಿದ್ದಾರೆ. ಕಾವೇರಿ ವಿಚಾರದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ದೆಹಲಿಗೆ ಹೋಗಿ ಅವರು ಪ್ರಧಾನಿಯವರ ಮೇಲೆ ಒತ್ತಡ ಹಾಕಲಿ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಕಿಡಿ ಕಾರಿದ್ದಾರೆ.
ನಗರದಲ್ಲಿಂದು ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಎರಡು ತಿಂಗಳಿಂದ ಸಮಸ್ಯೆಯಾಗಿದೆ. ಜೂನ್ ತಿಂಗಳಲ್ಲಿ ಮಳೆಯಾಗಿರಲಿಲ್ಲ. ಇವರೆಲ್ಲ ಅನುಭವದವರು, ಈಗ ತಾನೇ ಅಧಿಕಾರದಿಂದ ಕೆಳಗಿಳಿದು 4 ತಿಂಗಳಾಗಿದೆ. ಇವರೆಲ್ಲ ಏನು ಮಾಡಬೇಕಿತ್ತು, 25 ಜನ ಸಂಸದರು ಎಲ್ಲಿಯಾದರೂ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ : ಸಚಿವ ಶಿವಾನಂದ ವಿರುದ್ಧ ರೈತರ ಭಿಕ್ಷಾ ಪಾತ್ರೆ ಅಭಿಯಾನ
ಏನು ಮಾಡದೇ ಬಿಜೆಪಿಯವರು ಮಾತನಾಡುತ್ತಾರೆ. ಅಪೀಲ್ ಹಾಕಿ ವಾಸ್ತವ ಸ್ಥಿತಿಯ ಬಗ್ಗೆ ನಾವು ಮನವರಿಕೆ ಮಾಡಿ ಹೋರಾಟ ಕೈಗೊಳ್ಳುತ್ತೇವೆ. ಅವರೆಲ್ಲ ಕೆಆರ್‌ಎಸ್ ಡ್ಯಾಂಗೆ ರಾಜಕಾರಣ ಮಾಡೋಕೆ ಬರ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಕುಡಿಯುವ ನೀರಿಗಾಗಿ ನಾವು ಮ್ಯಾನೆಜ್ ಮಾಡಬೇಕು, ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು.
ನಮ್ಮ ಕರ್ತವ್ಯ ನಾವು ಮಾಡುತ್ತೇವೆ. ಇದರ ಮಧ್ಯೆ ಬಿಜೆಪಿಯವರು ರಾಜಕಾರಣ ಮಾಡಬೇಡಿ, ಚುನಾವಣೆ ಗೋಸ್ಕರ ರಾಜಕಾರಣ ಮಾಡಬೇಡಿ, ನಾವು ರಾಜಕಾರಣ ಕಲಿತುಕೊಂಡಿದ್ದೇವೆ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆಗೆ ಬಿಜೆಪಿ-ಜೆಡಿಎಸ್ ಮೈತ್ರಿಯ ಬಗ್ಗೆ ಮಾತನಾಡಿದ ಅವರು, ಹೊಂದಾಣಿಕೆ ಮಾಡಿಕೊಳ್ಳಲಿ ನಾವು ಚುನಾವಣೆ ಎದುರಿಸುತ್ತೇವೆ. ಮೊದಲು ರೈತರ ಸಮಸ್ಯೆ ಬಗೆಹರಿಸುವ ಕೆಲಸ ಮಾಡೋಣ, ಬರೀ ಮಾಧ್ಯಮದಲ್ಲಿ ಶೋ ಅಪ್ ಮಾಡುವುದಲ್ಲ. ನಾವು ಕೆಲಸ ಮಾಡಿ ತೋರಿಸುತ್ತೇವೆ.
ಯಾರ ಸಪೋರ್ಟ್ ಇಲ್ಲದಿದ್ದರೂ ನಮ್ಮ ಜಿಲ್ಲೆಯ ರೈತರಿಗೆ ಹೋರಾಟ ಮಾಡುವ ಶಕ್ತಿ ಇದೆ ಎಂದು ಟೀಕಾ ಪ್ರಹಾರ ಮಾಡಿದ್ದಾರೆ.
ಇದನ್ನೂ ಓದಿ : ತೆನೆ-ಕಮಲ ಮೈತ್ರಿ ಫಿಕ್ಸ್, ಜೆಡಿಎಸ್ ಗೆ ನಾಲ್ಕು ಸೀಟ್ : ಬಿಎಸ್ ವೈ ಘೋಷಣೆ
ಮಾಜಿ ಸಿಎಂ, ಬಿಜೆಪಿ ನಾಯಕರು ಹಾಗೂ 25 ಜನ ಸಂಸದರೆಲ್ಲರೂ ಹೋಗಿ ಕಾವೇರಿ ಪ್ರಾಧಿಕಾರದ ಮುಂದೆ ಮನವರಿಕೆ ಮಾಡಿಕೊಡಿ. ಹೋಗುತ್ತಿರುವ ನೀರನ್ನು ನಿಲ್ಲಿಸಿ ಎಂದು ಪ್ರಧಾನಿಯವರ ಮೇಲೆ ಒತ್ತಡ ಹಾಕಿ, ಅದನ್ನು ಬಿಟ್ಟು ಕೆಆರ್‌ಎಸ್ ಡ್ಯಾಂ ವೀಕ್ಷಣೆ ಮಾಡುವುದು ಎಷ್ಟು ಸರಿ? ವೀಕ್ಷಣೆ ಮಾಡಿದ ಬಳಿಕವಾದರೂ ಕೇಂದ್ರದ ಬಳಿ ಹೋಗಿ ಮನವರಿಕೆ ಮಾಡಿಕೊಡಲಿ. ಬರೀ ರಾಜಕಾರಣಕ್ಕಾಗಿ ವೀಕ್ಷಣೆ ಮಾಡಬೇಡಿ. ಯಾರು ಎಷ್ಟೇ ಪ್ರಚೋದನೆ ಮಾಡಿದರೂ, ನಮ್ಮ ಜಿಲ್ಲೆಯ ಜನ ಪ್ರಚೋದನೆಗೆ ಒಳಗಾಗಬೇಡಿ ಎಂದು ತಿಳಿಸಿದರು.
ರೈತರ ಪ್ರತಿಭಟನೆಯ ಕೂಗು ನಮಗೆ ಅರ್ಥವಾಗಿದೆ. ನಾವು ಪ್ರಾಮಾಣಿಕವಾಗಿ ರೈತರ ಪರ ಇದ್ದೇವೆ. ಒಂದು ಮಾತನಾಡಿದರೆ ಇನ್ನೊಂದು ಆಗುತ್ತದೆ ಅಷ್ಟೆ. ಅದರ ಬಗ್ಗೆ ನಾನು ಉತ್ತರ ಕೊಡುವುದಿಲ್ಲ. ನಮ್ಮ ಎದುರು ಇರುವ ಸಮಸ್ಯೆಗಳ ಬಗ್ಗೆ ಚಿಂತನೆ ಮಾಡಬೇಕು. ಯಾವ ಸಂದರ್ಭದಲ್ಲಿ ಮಾತನಾಡಿರುತ್ತಾರೋ ಅವರೇ ಉತ್ತರ ಕೊಡಬೇಕು. ಇದರ ಬಗ್ಗೆ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರು ಇದ್ದಾರೆ ಅವರೆಲ್ಲ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.