ಬೆಂಗಳೂರು: ಚಂದ್ರಯಾನ-3 ಯಶಸ್ಸು ಕಂಡಿದ್ದಕ್ಕೆ ವಿಜ್ಞಾನಿಗಳನ್ನು ಅಭಿನಂದಿಸಲು ಇಸ್ರೋ ಕಮಾಂಡಿಗ್ ಕೇಂದ್ರಕ್ಕೆ ಆಗಮಿಸಿದ ನರೇಂದ್ರ ಮೋದಿಯನ್ನು ನೋಡಲು ಬ್ಯಾರಿಕೇಡ್ ಹಿಂದೆ ನಿಂತಿದ್ದ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಲೇವಡಿ ಮಾಡಿತ್ತು. ಇದೀಗ ಕಾಂಗ್ರೆಸ್ ಟ್ವೀಟ್‌ಗೆ ತಿರುಗೇಟು ಕೊಟ್ಟಿರುವ ಬಿಜೆಪಿ, ‘ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿಯೇ’ ಎಂದು ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ‘ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದಿದ್ದು ಚಂದ್ರಯಾನದ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವುದಕ್ಕೇ ಹೊರತು ಪಕ್ಷದ ಸಭೆಗಲ್ಲ’ ಎಂದು ಬಿಜೆಪಿ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ; ‘ಛೇ, ಮಿನಿಮಮ್ ಮರ್ಯಾದೆಯೂ ಇಲ್ಲದಾಯಿತೇ’ ಎಂದು ಬಿಜೆಪಿಗರ ಕಾಲೆಳೆದ ಕಾಂಗ್ರೆಸ್!
‘ಆದಾಗ್ಯೂ ನಮ್ಮ ಪಕ್ಷದ ಪ್ರಮುಖರು ಜನಸಾಮಾನ್ಯರಂತೆ ನಿಂತು ಅವರ ಸಂತಸದಲ್ಲಿ ಪಾಲ್ಗೊಂಡು ಅವರೊಡನೆ ತಮ್ಮ ಅಭಿಮಾನ ಪ್ರದರ್ಶಿಸಿರುವುದರಲ್ಲಿ ಹುಳುಕು ಹುಡುಕಲೆತ್ನಿಸಿರುವ ನಿಮಗೆ ಕಾಮಾಲೆಯಂತೆ ಏನೋ ಕಾಯಿಲೆ ಇರಬಹುದು! ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿಯೇ ಎಂಬಂತೆ ಗಾಂಧಿ ಕುಟುಂಬದ ಜೀತಕ್ಕೆ ಬಿದ್ದವರಂತೆ ಸೇವೆ ಮಾಡುವ ಕಾಂಗ್ರೆಸ್ಸಿಗರಿಗೆ ಪ್ರಧಾನಮಂತ್ರಿಗಳ ಅಧಿಕೃತ ಸರ್ಕಾರಿ ಭೇಟಿಗೂ, ಅನೌಪಚಾರಿಕ ಭೇಟಿಗೂ ವ್ಯತ್ಯಾಸ ತಿಳಿದಿಲ್ಲ’ ಎಂದು ವಾಗ್ದಾಳಿ ನಡೆಸಿದೆ.
‘ತಮ್ಮ ಮೋಜಿಗಾಗಿ ಲಕ್ಷದ್ವೀಪಕ್ಕೆ ತೆರಳಲು ಸೇನಾ ನೌಕೆ ಬಳಸುತ್ತಿದ್ದವರು ಬಿಟ್ಟು ಹೋದ ಸಂಸ್ಕಾರದಲ್ಲಿ ಬೆಳೆದವರಿಗೆ ಇವು ಅರ್ಥ ಆಗದು. ಅಂದಹಾಗೆ ಮಲ್ಲಿಕಾರ್ಜುನ ಖರ್ಗೆಯವರಿಗೆ ‘ಗಾಂಧಿ’ಕುಟುಂಬ ಕೊಟ್ಟಿರುವ ಮರ್ಯಾದೆಯನ್ನು ಕರ್ನಾಟಕ ನೋಡಿದೆ’ ಎಂದು ಬಿಜೆಪಿ ಟ್ವೀಟ್ ಮಾಡಿ ಲೇವಡಿ ಮಾಡಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.