ಬೆಂಗಳೂರು: ಎರಡು ದಿನಗಳ ಕಾಲ ನಡೆದ ರಾಜ್ಯ ಚುನಾವಣಾ ಸಮಿತಿ ಸಭೆ ಬುಧವಾರ ಮುಕ್ತಾಯಗೊಂಡಿದೆ. ಇನ್ನು 224 ಕ್ಷೇತ್ರಗಳಲ್ಲಿ ವರುಣಾ, ಶಿವಮೊಗ್ಗ ಸೇರಿ 6-8 ಕ್ಷೇತ್ರಗಳ ವಿಚಾರದಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. ರಾಜ್ಯಾಧ್ಯಕ್ಷರೇ ಗುರುವಾರ ಈ ಕ್ಷೇತ್ರಗಳ ಹೆಸರನ್ನು ಅಂತಿಮಗೊಳಿಸಿ ನಂತರ ಪಟ್ಟಿಯನ್ನು ಹೈಕಮಾಂಡ್ಗೆ ಕಳುಹಿಸಲಿದ್ದಾರೆ.
ಏಪ್ರಿಲ್ 8 ರಂದು ನವದೆಹಲಿಯಲ್ಲಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಸಲಾಗುತ್ತದೆ. ಏಪ್ರಿಲ್ 20 ರ ಒಳಗೆ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.
ಮಾಜಿ ಸಚಿವ ಗೂಳಿಹಟ್ಟಿ ಶೇಖರಗೆ ಟಿಕೆಟ್ ಕೊಡಬೇಕೆಂದು ಬೆಂಬಲಿಗರು ಬಿ.ಎಸ್ ಯಡಿಯೂರಪ್ಪರನ್ನು ಒತ್ತಾಯಿಸಿದ್ದಾರೆ. ಗೂಳಿಹಟ್ಟಿ ಶೇಖರ್ ಹೆಸರನ್ನೂ ಹೈಕಮಾಂಡ್ಗೆ ಕಳಿಸಲಾಗುತ್ತದೆ. ಅಂತಿಮವಾಗಿ ಹೈಕಮಾಂಡ್ ಟಿಕೆಟ್ ಫೈನಲ್ ಮಾಡಲಿದೆ ಎಂದು ಹೇಳಿ ಕಳುಹಿಸಿದ್ದಾರೆ.
ಮೂರು ಹಂತದಲ್ಲಿ ಪಟ್ಟಿಯನ್ನು ಸಿದ್ಧಪಡಿಸಿದ್ದು, ಎ ಬಿ ಮತ್ತು ಸಿ ಎಂದು ವರ್ಗೀಕರಿಸಲಾಗಿದೆ. ಗೆಲ್ಲುವ ಸಾಧ್ಯತೆ ಹೆಚ್ಚಿರುವ ಕ್ಷೇತ್ರಗಳು, ತೀವ್ರ ಜಿದ್ದಾಜಿದ್ದಿ ಇದ್ದು ಪ್ರಯತ್ನ ಪಟ್ಟರೆ ಗೆಲ್ಲುವ ಸಾಧಿಸುವ ಕ್ಷೇತ್ರಗಳು ಮತ್ತು ಬಿಜೆಪಿ ದುರ್ಬಲವಾಗಿರುವ ಕ್ಷೇತ್ರಗಳಾಗಿ ವಿಂಗಡಿಸಿ ಪಟ್ಟಿ ಸಿದ್ಧಪಡಿಸಲಾಗಿದೆ.