Thursday, September 28, 2023
spot_img
- Advertisement -spot_img

ವಕ್ಫ್ ಕಾಯ್ದೆ ರದ್ದು ಕೋರಿ ಪ್ರಧಾನಿಗೆ ಪತ್ರ ಬರೆದ ಶಾಸಕ ಯತ್ನಾಳ್

ವಿಜಯಪುರ : ಕರ್ನಾಟಕ ವಕ್ಫ್ ಕಾಯ್ದೆ (Karnataka Wakf act) ರದ್ದು ಮಾಡುವಂತೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

1995ರ ಕರ್ನಾಟಕ ವಕ್ಫ್ ಕಾಯ್ದೆ ರದ್ದು ಮಾಡಬೇಕು. ಇದರಿಂದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಸರ್ಕಾರದ ವಶಕ್ಕೆ ಬರಲಿದೆ ಎಂದು ಶಾಸಕ ಯತ್ನಾಳ್ ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತ್ರಿವಳಿ ತಲಾಕ್, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯ ರದ್ಧತಿಯಂತಹ ನಿಮ್ಮ ನಿರ್ಧಾರಗಳು ದೇಶದ ಮೇಲೆ ಶಾಶ್ವತ ಪರಿಣಾಮ ಬೀರುವ ಬದಲಾವಣೆಗಳಾಗಿವೆ. ದೇಶದಾದ್ಯಂತ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಾಂವಿಧಾನಿಕ ಅಧಿಕಾರವನ್ನು ಬಳಸುತ್ತಿರುವ ವಕ್ಫ್ ಮಂಡಳಿಗೆ ಸಂಬಂಧಿಸಿದ ಸಮಸ್ಯೆಯನ್ನು ನಿಮ್ಮ ಗಮನಕ್ಕೆ ತರುವುದು ಈ ಪತ್ರದ ಉದ್ದೇಶವಾಗಿದೆ ಯತ್ನಾಳ್ ಪತ್ರದಲ್ಲಿ ಹೇಳಿದ್ದಾರೆ.

ವಕ್ಫ್ ಕಾಯ್ದೆಯನ್ನು ವಕ್ಫ್ ಆಸ್ತಿಗಳನ್ನು ನಿರ್ವಹಿಸಲು ಜಾರಿಗೆ ತರಲಾಗಿದ್ದರೂ, ಇದರಲ್ಲಿ ಇತರ ಧರ್ಮಗಳ ಅನುಯಾಯಿಗಳಿಗೆ ಸೇರಿದ ಆಸ್ತಿಗಳಿಗೆ ಯಾವುದೇ ಸಮಾನ ಕಾನೂನುಗಳಿಲ್ಲ. ವಕ್ಫ್ ಕಾಯ್ದೆ ಮೊದಲ ಬಾರಿಗೆ 1954ರಲ್ಲಿ ಸಂಸತ್ತು ಅಂಗೀಕರಿಸಿತು. ನಂತರ 1995 ರಲ್ಲಿ ಪರಿಷ್ಕರಿಸಲಾಯಿತು. ಇದು ವಕ್ಫ್ ಮಂಡಳಿಗಳಿಗೆ ಹೆಚ್ಚುವರಿ ಅಧಿಕಾರ ನೀಡಿತು. 2013ರಲ್ಲಿ, ಈ ಕಾಯ್ದೆಗೆ ಮತ್ತಷ್ಟು ತಿದ್ದುಪಡಿ ತರಲಾಗಿದೆ. ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ವಕ್ಫ್ ಮಂಡಳಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಕ್ಫ್​ಗೆ ಭೂಮಿಯನ್ನು ವಶಪಡಿಸಿಕೊಳ್ಳುವುದು ಜಾತ್ಯತೀತತೆ, ಏಕತೆ ಮತ್ತು ನಮ್ಮ ರಾಷ್ಟ್ರದ ಸಮಗ್ರತೆಯ ತತ್ವಗಳಿಗೆ ವಿರುದ್ಧವಾಗಿದೆ ಎಂಬುದನ್ನು ಸಂಸತ್ತಿನ ಸದಸ್ಯರು, ಅಧಿಕಾರಿಗಳು, ವಕೀಲರು ಮತ್ತು ವಿದ್ವಾಂಸರು ಸೇರಿದಂತೆ ವಕ್ಫ್ ಮಂಡಳಿಯ ಸದಸ್ಯರು ಒಪ್ಪಬೇಕಾಗುತ್ತದೆ. ವಕ್ಫ್ ಮಂಡಳಿಗಳು ರಾಜ್ಯದ ಮೇಲೆ ಆರ್ಥಿಕ ಹೊರೆ ಹೇರುತ್ತಿದೆ. ಮಸೀದಿಗಳು ಅಥವಾ ದರ್ಗಾಗಳಿಂದ ಯಾವುದೇ ಹಣಕಾಸಿನ ಸಹಾಯ ಕೇಳದ ಕಾರಣ, ಇದು ತೆರಿಗೆದಾರರ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ಯತ್ನಾಳ್ ಹೇಳಿದ್ದಾರೆ.

ಶಾಸಕ ಯತ್ನಾಳ್ ಪ್ರಧಾನಿಗೆ ಬರೆದ ಪತ್ರ

ಭಾರತದ ವಕ್ಫ್ ನಿರ್ವಹಣಾ ವ್ಯವಸ್ಥೆಯ ಮಾಹಿತಿ ಪ್ರಕಾರ, ಪ್ರಸ್ತುತ ಅದರ ಬಳಿ ಒಟ್ಟು 8,54,509 ಆಸ್ತಿಗಳಿವೆ. ಟರ್ಕಿ, ಲಿಬಿಯಾ, ಈಜಿಪ್ಟ್, ಸುಡಾನ್, ಲೆಬನಾನ್, ಸಿರಿಯಾ, ಜೋರ್ಡಾನ್, ಟುನೀಶಿಯಾ ಮತ್ತು ಇರಾಕ್‌ನಂತಹ ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲಿ ವಕ್ಫ್ ವ್ಯವಸ್ಥೆಗಳಿಲ್ಲ. ಹಾಗಾಗಿ, ವಕ್ಫ್ ಬೋರ್ಡ್‌ನ ಅಸಾಧಾರಣ ಅಧಿಕಾರವನ್ನು ತಕ್ಷಣವೇ ಹಿಂಪಡೆಯಬೇಕು. ವಕ್ಫ್ ಮಂಡಳಿಯವರು ದಾನದ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಕಾನೂನು ಬದ್ಧಗೊಳಿಸುತ್ತಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದಾರೆ.

ವಕ್ಫ್ ಕಾಯ್ದೆಯ ಸೆಕ್ಷನ್ 85ರ ಪ್ರಕಾರ, ಒಬ್ಬ ವ್ಯಕ್ತಿ ವಕ್ಫ್ ಬೋರ್ಡ್ ನ್ಯಾಯಾಧೀಕರಣದ ಮುಂದೆ ಒಂದು ತುಂಡು ಭೂಮಿಯ ಮಾಲೀಕತ್ವ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ, ಅವರು ಭೂಮಿಯನ್ನು ಖಾಲಿ ಮಾಡುವಂತೆ ಒತ್ತಾಯಿಸಲಾಗುತ್ತದೆ. ನ್ಯಾಯಾಧಿಕರಣದ ತೀರ್ಮಾನವೇ ಅಂತಿಮವಾಗಿದ್ದು, ಸುಪ್ರೀಂ ಕೋರ್ಟ್ ಕೂಡ ಅದನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ಈ ಎಲ್ಲಾ ಕಾರಣಗಳಿಂದ ವಕ್ಫ್ ಕಾಯ್ದೆ ರದ್ದು ಮಾಡುವಂತೆ ಯತ್ನಾಳ್ ಆಗ್ರಹಿಸಿದ್ದಾರೆ. ಇವಿಷ್ಟೇ ಅಲ್ಲದೆ ವಕ್ಫ್ ಕಾಯ್ದೆ ಮತ್ತು ವಕ್ಫ್ ಬೋರ್ಡ್ ಕುರಿತು ಸವಿಸ್ತಾರವಾದ ವಿಷಯಗಳನ್ನು ಯತ್ನಾಳ್ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ದೆಹಲಿಯ 123 ವಕ್ಫ್ ಆಸ್ತಿ ಕೇಂದ್ರದ ವಶಕ್ಕೆ :

ದೆಹಲಿಯ ಐತಿಹಾಸಿಕ ಜಾಮಾ ಮಸೀದಿ (ಜುಮಾ ಮಸೀದಿ) ಸೇರಿ ವಕ್ಫ್ ಮಂಡಳಿಗೆ ಸೇರಿದ 123 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಆಗಸ್ಟ್‌ 22ರಂದು ನೋಟಿಸ್‌ ನೀಡಿದೆ. ಮಸೀದಿಗಳು, ದರ್ಗಾಗಳು ಮತ್ತು ಸ್ಮಶಾನಗಳನ್ನು ಒಳಗೊಂಡಿರುವ 123 ವಕ್ಫ್ ಬೋರ್ಡ್ ಆಸ್ತಿಗಳ ನಿಯಂತ್ರಣವನ್ನು ವಹಿಸಿಕೊಳ್ಳಲು ಈ ವರ್ಷದ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ಇಬ್ಬರು ಸದಸ್ಯರನ್ನೊಳಗೊಂಡ ಸಮಿತಿ ನೀಡಿದ ಶಿಫಾರಸುಗಳನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles