ಬೆಂಗಳೂರು: ʼಕೇವಲ ಅಂಬಾನಿ-ಅದಾನಿ ಜೇಬಿನಲ್ಲಿ ಹಣ ಇದ್ದರೆ ಬಡವರ, ಮಧ್ಯಮ ವರ್ಗದವರ ಉದ್ಧಾರ ಸಾಧ್ಯವಿಲ್ಲʼ ಎಂದಿದ್ದ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ.
ʼಮಾನ್ಯ ಮುಖ್ಯಮಂತ್ರಿಗಳ ಆಶಯ ಸರಿಯಾಗಿಯೇ ಇದೆ. ಬಡವರ ಜೇಬಿನಲ್ಲಿ ಹಣವಿದ್ದರೆ ಮಾತ್ರ ಆರ್ಥಿಕತೆ ಬೆಳವಣಿಗೆಯಾಗುತ್ತದೆ. ರಾಷ್ಟ್ರದಲ್ಲೇ ಅತ್ಯಂತ ಶ್ರೀಮಂತ ನಿಮ್ಮ “ಡಿಕೆಶಿ”ಯ (ಡಿ.ಕೆ.ಶಿವಕುಮಾರ್) ಬಳಿ 1,416 ಕೋಟಿ ಇದೆಯಂತೆ, ದಯವಿಟ್ಟು ಅದನ್ನು ಬಡವರಿಗೆ ಹಂಚುವುದಕ್ಕೆ ಹೇಳಿ. ಅಷ್ಟು ಹಣ ಕೇವಲ ಡಿಕೆಶಿಯ ಬಳಿ ಇದ್ದರೇ ಅದರಿಂದ ಆರ್ಥಿಕ ಬೆಳವಣಿಗೆ ಆಗುವುದಿಲ್ಲ. ಬಡವರ ಜೇಬಿನಲ್ಲಿ ಹಣವಿರಬೇಕು ಎಂದು ಯತ್ನಾಳ್ ಸಿಎಂಗೆ ಕೌಂಟರ್ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?: ಇಂದು ಡಾ.ಸಿದ್ದಲಿಂಗಯ್ಯ ಅವರ ಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಕೇವಲ ಅಂಬಾನಿ-ಅದಾನಿ ಅವರ ಜೇಬಿನಲ್ಲಿ ಹಣ ಇದ್ದರೆ ಬಡವರ, ಮಧ್ಯಮ ವರ್ಗದವರ ಉದ್ಧಾರ ಸಾಧ್ಯವಿಲ್ಲ. ತಿಮ್ಮ-ಬೋರ-ಕಾಳನ ಜೇಬಿನಲ್ಲಿ ಹಣ ಇದ್ದರೆ ಮಾತ್ರ ಆರ್ಥಿಕತೆ ಬೆಳವಣಿಗೆ ಆಗುತ್ತದೆ. ದುಡಿಯುವವರ, ಶ್ರಮಿಕರ ಜೇಬಿನಲ್ಲಿ ಹಣ ಇದ್ದರೆ ಅವರು ದೇಶದ ಆರ್ಥಿಕತೆಯ ಬೆಳವಣಿಗೆಗೆ ಕಾರಣರಾಗುತ್ತಾರೆ ಎಂದಿದ್ದರು.
ಇದನ್ನೂ ಓದಿ:‘ಬರೀ ಅಂಬಾನಿ-ಅದಾನಿ ಜೇಬಿನಲ್ಲಿ ಹಣ ಇದ್ದರೆ ಬಡವರ, ಮಧ್ಯಮ ವರ್ಗದವರ ಉದ್ಧಾರ ಸಾಧ್ಯವಿಲ್ಲ’
ಕೇವಲ ಅಂಬಾನಿ, ಅದಾನಿ ಜೇಬು ತುಂಬಿಸುವವರ ಕೈಗೆ ಅಧಿಕಾರ ಕೊಟ್ಟು ಇಡೀ ದೇಶ ಪರಿತಪಿಸುವಂತಾಗಿದೆ. ಈ ಕಾರಣಕ್ಕೆ ನಾವು ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಕಾರ್ಯಕ್ರಮಗಳನ್ನು ಜಾರಿ ಮಾಡಿ ಜನರ ಜೇಬಿಗೆ ಹಣ ಹಾಕುವ ಕೆಲಸಕ್ಕೆ ಮುಂದಾಗಿದ್ದೇವೆ. ಇದರಿಂದ ನಮ್ಮ ಆರ್ಥಿಕತೆ ಚೈತನ್ಯ ಪಡೆದುಕೊಳ್ಳುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು.
ಇನ್ನು ಇಡೀ ದೇಶದಲ್ಲೇ ಅತ್ಯಂತ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಡಿ.ಕೆ.ಶಿವಕುಮಾರ್ ಮೊದಲ ಸ್ಥಾನದಲ್ಲಿರುವುದಾಗಿ ಇತ್ತೀಚೆಗೆ ವರದಿಯೊಂದು ಬಿಡುಗಡೆಯಾಗಿತ್ತು. ಯತ್ನಾಳ್ ಇದನ್ನು ಉಲ್ಲೇಖಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಮಾತಿಗೆ ತಿರುಗೇಟು ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.