ಬೆಂಗಳೂರು: ನ್ಯಾಯಮೂರ್ತಿ ನಟರಾಜನ್ ಮಾಡಳ್ ವಿರೂಪಾಕ್ಷಪ್ಪಗೆ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ. ಕೆಎಸ್‌ಡಿಎಲ್ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ರಿಲೀಫ್ ಸಿಕ್ಕಿದೆ.
5 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಇಬ್ಬರ ಭದ್ರತೆಯ ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿತು. ಅಲ್ಲದೇ ಇದೇ 17ಕ್ಕೆ ವಿಚಾರಣೆಯನ್ನು ಮುಂದೂಡಿದೆ. 48 ಗಂಟೆಗಳ ಒಳಗೆ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಲು ಹೈಕೋರ್ಟ್ ಸೂಚಿಸಿದೆ. ಹೀಗಾಗಿ ವಿರೂಪಾಕ್ಷಪ್ಪ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ.
ಪ್ರಕರಣದ ತುರ್ತು ವಿಚಾರಣೆ ನಡೆಸಿ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಹೈಕೋರ್ಟ್ ಗೆ ವಿರೂಪಾಕ್ಷಪ್ಪ ಮನವಿ ಮಾಡಿಕೊಂಡಿದ್ದರು. ತಕ್ಷಣ ವಿಚಾರಣೆ ನಡೆಸಲು ಒಪ್ಪದ ಕೋರ್ಟ್ ಮಂಗಳವಾರಕ್ಕೆ ಮುಂದೂಡಿತ್ತು. ಅದರಂತೆ ಇಂದು ಹೈಕೋರ್ಟ್‌ನ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೆ.ನಟರಾಜನ್ ಅರ್ಜಿ ವಿಚಾರಣೆ ನಡೆಸಿದರು. ವಿರೂಪಾಕ್ಷಪ್ಪ ಪರವಾಗಿ ವಕೀಲ ಸಂದೀಪ್ ಪಾಟೀಲ್ ವಾದ ಮಂಡಿಸಿ, ಮಧ್ಯಂತರ ನಿರೀಕ್ಷಣಾ ಜಾಮೀನಿಗಾಗಿ ಮನವಿ ಮಾಡಿದರು.