ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಚಾರ್ಜ್ ಶೀಟ್ ಬಿಟುಗಡೆ ಮಾಡಿರುವ ಬಿಜೆಪಿ ವಿರುದ್ಧ ಮಾತನಾಡಿದ್ದ ಮಾಜಿ ಸಿಎಂ ಜಗದೀಶ್ ಶೇಟ್ಟರ್, ‘ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ, ಅದಕ್ಕೇ ಚಾರ್ಜ್ ಶೀಟ್ ಬಿಡುಗಡೆ ಮಾಡ್ತಿದ್ದಾರೆ’ ಎಂದು ಹೇಳಿದ್ದರು. ಶೇಟ್ಟರ್ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಬಿಜೆಪಿ ಶಾಸಕ ಆರ್ ಅಶೋಕ್, ‘ಜಗದೀಶ್ ಶೆಟ್ಟರ್ ನಮ್ಮ ಪಕ್ಷದಲ್ಲಿ ಇದ್ದಾಗ ನಾಲ್ಕು ಸಲ ಚಾರ್ಜ್ ಶೀಟ್ ಬಿಡುಗಡೆ ಮಾಡಿದ್ರು; ಆಗ ಅವರಿಗೆ ಮಾಡಲು ಕೆಲಸ ಇರಲಿಲ್ಲವಾ’ ಎಂದು ತಿರುಗೇಟು ಕೊಟ್ಟಿದ್ದಾರೆ.
ಈ ಬಗ್ಗೆ ನಗರದಲ್ಲಿ ಮಾತನಾಡಿದ ಅಶೋಕ್, ‘ಒಂದು ಬೆರಳು ಮತ್ತೊಬ್ಬರ ಕಡೆ ತೋರಿಸಬೇಕಾದ್ರೆ; ಮೂರು ಬೆರಳು ನಮ್ಮ ಕಡೆಗೆ ತೋರಿಸುತ್ತೆ ಎಂಬ ವಿಚಾರ ಗಮನದಲ್ಲಿಟ್ಟುಕೊಂಡು ಮಾತಾಡಬೇಕು’ ಎಂದು ಶೆಟ್ಟರ್ ಅವರಿಗೆ ತಿರುಗೇಟು ಕೊಟ್ಟರು.
ಗೃಹಲಕ್ಷ್ಮಿ ಯೋಜನೆ ಬಗ್ಗೆ ಎಸ್ ಟಿ ಸೋಮಶೇಖರ್ ಸಭೆ ಮಾಡಿದ ವಿಚಾರವಾಗಿ ಮಾತನಾಡಿ, ‘ಅವರು ಶಾಸಕರು ಸಭೆ ಮಾಡಬಾರದಾ? ಅವರ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಸಭೆ ಮಾಡಲೇ ಬೇಕಾಗುತ್ತೆ; ಅದರಲ್ಲೇನು ವಿಶೇಷ?’ ಎಂದು ಸೋಮಶೇಖರ್ ನಡೆಯನ್ನು ಸಮರ್ಥಿಸಿಕೊಂಡರು.
ಇದನ್ನೂ ಓದಿ; ಪೊಲೀಸರನ್ನ ಬಿಟ್ಟು ವಸೂಲಿ ಮಾಡ್ತಾ ಇದ್ದಾರೆ: ಬೊಮ್ಮಾಯಿ ಗಂಭೀರ ಆರೋಪ
‘ಕಾಂಗ್ರೆಸ್ ಸರ್ಕಾರ ನೂರು ದಿನಗಳನ್ನು ಪೂರೈಸುತ್ತಿದೆ, ಸರ್ಕಾರದ ನೂರು ಕರಾಳ ದಿನಗಳಿವು. ಒಂದೇಒಂದು ಅಭಿವೃದ್ಧಿ ಕೆಲಸ ಆಗಿಲ್ಲ. ರಸ್ತೆ, ಕುಡಿಯುವ ನೀರು, ಏನೂ ಆಗಿಲ್ಲ. ಗುತ್ತಿಗೆದಾರರಿಗೆ ಬಿಲ್ ಬಿಡುಗಡೆ ಮಾಡಿಲ್ಲ. ಅಭಿವೃದ್ಧಿ ರಹಿತ ದಿನಗಳಿವು; ರಾಜ್ಯದ ಅಭಿವೃದ್ಧಿ ನಮ್ಮ ಸರ್ಕಾರ ಇದ್ದಾಗ ಎಲ್ಲಿ ನಿಂತಿತ್ತೋ ಅಲ್ಲೇ ನಿಂತಿದೆ. ಬೆಂಗಳೂರಿನಂತ ನಗರದಲ್ಲೇ ಲೋಡ್ ಶೆಡ್ಡಿಂಗ್ ಆಗುತ್ತಿದೆ. ಉಚಿತ ಕೊಡುಗೆಗಾಗಿ ಲೋಡ್ ಶೆಡ್ಡಿಂಗ್ ಮಾಡಲಾಗಿದೆ’ ಎಂದು ಆರೋಪಿಸಿದರು.
‘ಯಾರೂ ಪಕ್ಷ ಬಿಟ್ಟು ಹೋಗಲ್ಲ, ಹಿಂದೆ ನಮ್ಮ ಸರ್ಕಾರ ಬರಲು ಸಂಖ್ಯಾಬಲ ಬೇಕಿತ್ತು. ಆಗ ಕೆಲವರು ನಮ್ಮ ಪಕ್ಷಕ್ಕೆ ಬಂದು ಬೆಂಬಲ ಕೊಟ್ರು. ಕಾಂಗ್ರೆಸ್‌ಗೆ ಈಗ ಸಂಖ್ಯಾಬಲ ಇದೆ. ಆದರೂ ಇವತ್ತು ಆಪರೇಷನ್ ಹಸ್ತ ಯಾಕೆ ಮಾಡಬೇಕು? ನನ್ನ ಪ್ರಕಾರ ಯಾರೂ ಪಕ್ಷ ಬಿಡಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.