ಬೆಂಗಳೂರು: ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಕಾಂಗ್ರೆಸ್ ಸೇರ್ತಾರಾ ಅನ್ನೋ ವಿಚಾರಕ್ಕೆ ಮತ್ತೆ ಪುಷ್ಠಿ ಬಂದಿದ್ದು, ಅವರ ಕಾಂಗ್ರೆಸ್ ಸೇರ್ಪಡೆಯ ಕಾಲ ಸನ್ನಿಹಿತವಾಗಿದೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಎಸ್.ಟಿ.ಸೋಮಶೇಖರ್ ಅವರು ಕಾಂಗ್ರೆಸ್ ಸೇರಲು ಭರ್ಜರಿ ತಯಾರಿ ನಡೆಸಿದ್ದು, ಈಗಾಗಲೇ ಡಿ.ಕೆ.ಸುರೇಶ್ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮೂರು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ.
ಮೊದಲ ಹಂತದಲ್ಲಿ ತನ್ನ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿರುವ ಅವರು, ಬಿಜೆಪಿ ಕಾರ್ಯಕ್ರಮಗಳಿಗೆ ಗೈರಾಗಿದ್ದರು. ಈಗ ಮುಂದಿನ ಹಂತವಾಗಿ ಡಿಕೆಶಿ ಜೊತೆಗೆ ಸ್ವಕ್ಷೇತ್ರ ಯಶವಂತಪುರದಲ್ಲಿ ಖಾಸಗಿಯಾಗಿ ಸರ್ವೆಗೆ ಮುಂದಾಗಿದ್ದು, ಹಲವು ಪ್ರಶ್ನೆಗಳನ್ನು ಒಳಗೊಂಡಿರುವ ಸಮೀಕ್ಷೆ ಮಾಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಹತ್ತಾರು ಪ್ರಶ್ನೆಗಳನ್ನು ಹೊಂದಿರುವ ಸಮೀಕ್ಷೆಯನ್ನು ಖಾಸಗಿ ಸಂಸ್ಥೆಯಿಂದ ಮಾಡಿಸಲಾಗುತ್ತಿದ್ದು, ವರದಿ ಆಧರಿಸಿ, ಸೋಮಶೇಖರ್ ಕಾಂಗ್ರೆಸ್ ಸೇರಿಕೊಳ್ಳಲಿದ್ದಾರೆ. ಇದೇ ಸಮೀಕ್ಷೆಯ ಉತ್ತರಗಳನ್ನು ನೋಡಿ ಡಿಕೆ ಬ್ರದರ್ಸ್ ಎಸ್.ಟಿ.ಸೋಮಶೇಖರ್ ಅವರನ್ನ ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ ಎಂದೂ ಹೇಳಲಾಗುತ್ತಿದೆ.
ಸಮೀಕ್ಷೆಯಲ್ಲಿರುವ ಪ್ರಶ್ನೆಗಳು ಹೀಗಿವೆ..
* ಸೋಮಶೇಖರ್ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ರೆ ಮತದಾರರು ಏನಂತಾರೆ?
* ಒಂದು ವೇಳೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿ, ಮತ್ತೆ ಚುನಾವಣೆಗೆ ಸ್ವರ್ಧಿಸಿದ್ರೆ ಮತ ಹಾಕ್ತೀರಾ?
* ಸೋಮಶೇಖರ್ ಅವರು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರಾ?
* ಪಕ್ಷ ಬದಲಾವಣೆ ಮಾಡಿ, ಬೇರೆ ಪಕ್ಷದಿಂದ ಚುನಾವಣೆಗೆ ನಿಂತ್ರೆ ಅವರ ಅಭಿವೃದ್ಧಿಗೆ ಮತ ಹಾಕ್ತೀರಾ?
* ಪಕ್ಷಕ್ಕಿಂತ ವ್ಯಕ್ತಿ ಮುಖ್ಯನಾ? ಅಥವಾ ಪಕ್ಷ ಮುಖ್ಯನಾ?
* ಒಂದು ವೇಳೆ STS ಬದಲು ಮಗನನ್ನೂ ಚುನಾವಣೆಗೆ ನಿಲ್ಲಿಸಿದರೆ ವೋಟ್ ಹಾಕ್ತೀರಾ?
* ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಸೋಮಶೇಖರ್ ಕೈ ಹಿಡಿಯುತ್ತಾ?
* STS ಕಾಂಗ್ರೆಸ್ ಅಭ್ಯರ್ಥಿ ಆದ್ರೆ, ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಲ್ಲಿಸಿದ್ರೆ ಮತ್ತೆ STS ಗೆಲ್ತಾರಾ?
* ಸೋಮಶೇಖರ್‌ಗೆ ಮತ್ತೆ ಒಕ್ಕಲಿಗರು ವೋಟ್ ಹಾಕ್ತಾರಾ?
* ಮೈತ್ರಿ ಅಭ್ಯರ್ಥಿಯಾಗಿ ಶೋಭ ಕರಂದ್ಲಾಜೆ, ಜವರಾಯಿಗೌಡ ಅಥವಾ ಬೇರೆಯವರನ್ನು ನಿಲ್ಲಿಸಿದ್ರೆ ಎಸ್.ಟಿ.ಸೋಮಶೇಖರ್ ಗೆಲ್ತಾರಾ?
* ಜವರಾಯಿಗೌಡ್ರಿಗೆ ಅನುಕಂಪದ ಅಲೆ ಇದೆಯಾ?
* ಈ ಹಿಂದೆ ಶೋಭಾ ಕಾರಂದ್ಲಂಜೆ ಶಾಸಕಿಯಾದಾಗ ಮಾಡಿದ ಕಾಮಗಾರಿಗಳು ಶೋಭಾ ಅವರಿಗೆ ಮತ್ತೆ ಕೈ ಹಿಡಿಯುತ್ತಾ?
ಒಟ್ಟಾರೆ ಎಸ್.ಟಿ.ಸೋಮಶೇಖರ್ ಅವರು ಕಾಂಗ್ರೆಸ್ ಸೇರುವ ಗೊಂದಲಗಳಿಗೆ ಶೀಘ್ರದಲ್ಲೇ ತೆರೆ ಬೀಳುವ ಸಾಧ್ಯತೆ ಇದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.