ಬೆಂಗಳೂರು : ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ ಎಂಬ ಚರ್ಚೆಯ ನಡುವೆಯೇ ಸೋಮಶೇಖರ್ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್‌ನಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಡಿಕೆಶಿ ಜೊತೆ ಸೋಮಶೇಖರ್ ವೇದಿಕೆ ಹಂಚಿಕೊಂಡರು.
ನನ್ನ ಸೋಮಶೇಖರ್ ಸಂಬಂಧ 25 ವರ್ಷಗಳದ್ದು: ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ನನ್ನ ಸೋಮಶೇಖರ್ ಸಂಬಂಧ ಸ್ನೇಹ ಸಂಬಂಧ 25 ವರ್ಷಗಳಿಂದ ಇದೆ. ಸೋಮಶೇಖರ್ ನಾನು ಗೊಬ್ಬರ ಹಾಕಿ ಬೆಳೆಸಿದ ಗಿಡ. ಬೇರೆಯವರು ಹಣ್ಣು ತಿನ್ನಬಾರದೆಂದು ಭಾವಿಸಿದ್ದೇನೆ. ಯಶವಂತಪುರ ನನ್ನ ಕ್ಷೇತ್ರ, ಸೋಮಶೇಖರ್ ರನ್ನು ನಾನೇ ಇಲ್ಲಿಗೆ ಕರೆತಂದಿದ್ದು. ಹಾಗಾಗಿ ಅವರ ಕೆಲಸ ಮಾಡಿ ಕೊಡಲು ಬಂದಿದ್ದೇನೆ ಎಂದರು. ನಾನು ರಾಜಕೀಯ ಭಾಷಣ ಮಾಡುವುದಿಲ್ಲ. ಎಲ್ಲ ಇಲಾಖೆಯ ಅಧಿಕಾರಿಗಳು ಇದ್ದಾರೆ. ಸುಮ್ಮನೆ ಹಳೆಯ ವಿಚಾರಗಳನ್ನು ಚರ್ಚೆ ಮಾಡಲ್ಲ ಎಂದು ಹೇಳಿದರು.
ನನಗೆ ಟಿಕೆಟ್ ಕೊಡಿಸಿದ್ದೇ ಡಿಕೆಶಿ : ಶಾಸಕ ಸೋಮಶೇಖರ್ ಮಾತನಾಡಿ, ನನಗೆ ಉತ್ತರಹಳ್ಳಿ, ಯಶವಂತಪುರ ಟಿಕೆಟ್ ಕೊಡಿಸಿದ್ದೇ ಡಿಕೆಶಿ ಎಂದರು. ನಾನು ಡಿ.ಕೆ ಶಿವಕುಮಾರ್ ಹಾಗು ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದು ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ. ಅದನ್ನು ತಪ್ಪಾಗಿ ಭಾವಿಸಿ ಏನೆನೋ ಬಿಂಬಿಸಿದ್ದಾರೆ. ನನಗೆ ನನ್ನ ಕ್ಷೇತ್ರದ ಅಭಿವೃದ್ಧಿ ಮುಖ್ಯ. ನನ್ನ ಕ್ಷೇತ್ರದ ಅಭಿವೃದ್ಧಿ ಗೆ 10,000 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.


ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಬೆಂಗಳೂರು ನಗರಾಭಿವೃದ್ದಿ ಸಚಿವರಾಗಿರುವ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಯಶವಂತಪುರದ ಜನತೆಯ ಸಮಸ್ಯೆ ಆಲಿಸಲಾಯಿತು. ಕ್ಷೇತ್ರದ ಅಭಿವೃದಿಯ ಬಗ್ಗೆ ಚರ್ಚಿಸಲಾಯಿತು.
ಜನಸ್ಪಂದನ ಕಾರ್ಯಕ್ರಮದಲ್ಲಿ ಯಶವಂತಪುರ ಕ್ಷೇತ್ರದ ಸುಮಾರು 22 ವಾರ್ಡ್ ಗಳ ಕುಡಿಯುವ ನೀರು, ರಸ್ತೆ, ಫುಟ್ಪಾತ್ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಜನರು ಡಿಕೆಶಿಗೆ ಮನವರಿಕೆ ಮಾಡಿದರು.
ಬನಶಂಕರಿಯ ಕೆಲವು ಭಾಗಗಳಲ್ಲಿ ಹಲವಾರು ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಬೇಕು. ಕನಕಪುರ ರಸ್ತೆಯಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಜನರು ಆಗ್ರಹಿಸಿದರು. ಸರ್ಕಾರಿ ಶಾಲೆಗಳನ್ನು ಚುನಾವಣೆಗೆ ಬಳಸುತ್ತಿದ್ದೀರಿ, ಮುಂದಿನ ಚುನಾವಣೆಯ ಒಳಗಾಗಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಿ. ಇಲ್ಲವಾದಲ್ಲಿ ಸರ್ಕಾರಿ ಶಾಲೆಯಲ್ಲಿ ಚುನಾವಣೆ ನಡೆಸುವುದನ್ನು ನಿಲ್ಲಿಸಿ ಎಂದರು.
ನೆಲಮಂಗಲ ಕಾಂಗ್ರೆಸ್ ಶಾಸಕ ಶ್ರೀನಿವಾಸ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿಯ ಇತರ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.