ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅಸಮಾಧಾನ ಹೊರಹಾಕಿರುವ ವಿಚಾರಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಯತ್ನಾಳ್, ಕಾಂಗ್ರೆಸ್ ಪಾರ್ಟಿಯ ಶಿಸ್ತಿನ ಬಗ್ಗೆ ಪುಂಖಾನುಪುಂಖವಾಗಿ ಸದನದಲ್ಲಿ ಕಥೆ ಹೊಡೆದಿದ್ದ “ಅಧ್ಯಕ್ಷ” ಡಿ.ಕೆ.ಶಿವಕುಮಾರ್ ಅವರಿಗೆ ಬಿ.ಕೆ.ಹರಿಪ್ರಸಾದ್ ಮಾತುಗಳು ಅವರ ಪಾರ್ಟಿಯ ಶಿಸ್ತಿನ ಚೌಕಟ್ಟಿನಲ್ಲಿರುವುದೇ ಎಂದು ಪ್ರಶ್ನಿಸಿದ್ದಾರೆ.
ಹಿಂದುಳಿದ ನಾಯಕರಾದ ಸಿದ್ದರಾಮಯ್ಯ ಅವರ ವಿರುದ್ಧ “ಮುಖ್ಯಮಂತ್ರಿ ಆಕಾಂಕ್ಷಿಗಳು” ಮಾಡುತ್ತಿರುವ ಷಡ್ಯಂತ್ರವೇ? ಎಂದು ಕುಟುಕಿರುವ ಯತ್ನಾಳ್, ನೇರವಾಗಿ ಸಿದ್ದರಾಮಯ್ಯನವರನ್ನು ಎದುರಿಸಲಾಗದೆ, ಹರಿಪ್ರಸಾದ್ ಅವರನ್ನು ದಾಳವಾಗಿ ಬಳಸುತ್ತಿರುವ “ಆಕಾಂಕ್ಷಿ” ಯಾರು ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ.
ಇದನ್ನೂ ಓದಿ: ಜೆಡಿಎಸ್- ಬಿಜೆಪಿ ಮೈತ್ರಿ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ :ಉಮೇಶ್ ಜಾಧವ್
ಹರಿಪ್ರಸಾದ್ ಹೇಳಿದ್ದೇನು?: ‘ನಾನು ಮಂತ್ರಿಯಾಗಿದ್ದರೆ ನಿಮ್ಮನ್ನೆಲ್ಲ ಭೇಟಿಯಾಗೋಕೆ ಆಗ್ತಿರಲಿಲ್ಲ. ನನ್ನನ್ನು ಮಂತ್ರಿ ಮಾಡದ್ದಕ್ಕೆ ರಾಜ್ಯದ ಮುಖ್ಯಮಂತ್ರಿಗಳಿಗೆ ಧನ್ಯವಾದ’ ಎಂದು ಬಿ.ಕೆ ಹರಿಪ್ರಸಾದ್ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದರು.
ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶದಲ್ಲಿ ಮಾತನಾಡಿದ್ದ ಅವರು, ನಾನು 40 ವರ್ಷದ ಹಿಂದೆಯೇ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ನಮ್ಮಸಮುದಾಯದವರು ಕರ್ನಾಟಕದಲ್ಲಿ ಮಾತ್ರವಲ್ಲ, ಆಂಧ್ರ, ಕೇರಳದಲ್ಲೂ ಇದ್ದಾರೆ ಎಂದಿದ್ದರು.
ದೇವರಾಜ ಅರಸು ಅವರ ಜನ್ಮ ದಿನದಂದು ಸಿಎಂ ಸಿದ್ದರಾಮಯ್ಯ ಅರಸು ಅವರ ಹಳೆಯ ಕಾರಿನಲ್ಲಿ ಸುತ್ತಾಡಿದ್ದ ವಿಚಾರವನ್ನು ಪ್ರಸ್ತಾಪಿಸಿ ಟಾಂಗ್ ನೀಡಿದ್ದ ಹರಿಪ್ರಸಾದ್, ಅರಸು ಅವರ ಕಾರಿನಲ್ಲಿ ಕುಳಿತ ತಕ್ಷಣ ಯಾರೂ ಅವರಂತೆ ಆಗಲ್ಲ. ಅರಸು ಅವರ ಚಿಂತನೆ ನಮ್ಮಲ್ಲಿ ಬರಬೇಕು. ಇವರ ಕೈಯಲ್ಲಿ ಅರಸು ಅವರ ಮೊಮ್ಮಗನನ್ನು ಎಂಎಲ್‌ಸಿ ಮಾಡೋಕೆ ಆಗಿಲ್ಲ ಎಂದು ಗುಡುಗಿದ್ದರು.
ಇದನ್ನೂ ಓದಿ: ಮಂತ್ರಿಗಳ ಆಕ್ರೋಶಕ್ಕೆ ಕಾರಣವಾಯ್ತು ಹರಿಪ್ರಸಾದ್ ಹೇಳಿಕೆ
ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ, ಹೀಗೆ ಎಲ್ಲಾ ಗಾಂಧಿಗಳ ಜೊತೆ ನಾನು ಕೆಲಸ ಮಾಡಿದ್ದೇನೆ. ಆದರೆ, ಅಧಿಕಾರಕ್ಕಾಗಿ ಯಾರ ಬಳಿಯೂ ಹೋಗಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.