ರಾಮನಗರ: ಹೆಚ್‌ಡಿಕೆಯಿಂದ ಇಡೀ ಜಿಲ್ಲೆಯಲ್ಲಿ ಒಬ್ಬ ಜೆಡಿಎಸ್ ಕಾರ್ಯಕರ್ತನಿಗೂ ಅನುಕೂಲ ಆಗಿಲ್ಲ. ಕಾರ್ಯಕರ್ತ, ಮುಖಂಡರಿಗೆ ಪಕ್ಷದಲ್ಲಿ ಒಂದು ಸ್ಥಾನಮಾನ ನೀಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಟಾಂಗ್ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕುಮಾರಸ್ವಾಮಿ ಕುಟುಂಬದ ವಂಶಪಾರಂಪರ್ಯ ರಾಜಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ ಜನತೆ ಅಂತ್ಯ ಹಾಡಲಿದ್ದಾರೆ ಎಂದರು. ಜಿಲ್ಲೆಯಲ್ಲಿ ಜೆಡಿಎಸ್‌ನಿಂದ ನೊಂದವರೇ ಹೆಚ್ಚು. ಕೇವಲ ಅಪ್ಪ-ಮಗ ಫೋಟೋ ಹಾಕಿಕೊಂಡು ಜಿಲ್ಲೆಯ ಜನರನ್ನು ಗುಲಾಮರ ರೀತಿ ನೋಡುತ್ತಿದ್ದಾರೆ. ಆದರೆ ಇದು 2023ರಲ್ಲಿ ನಡೆಯುವುದಿಲ್ಲ. ಜನರು ತಕ್ಕಪಾಠ ಕಲಿಸುತ್ತಾರೆ ಎಂದು ಗುಡುಗಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೂ ಗೆಲುವು ಸಾಧಿಸುತ್ತಿದ್ದ ಕಾಂಗ್ರೆಸ್ – ಜೆಡಿಎಸ್ ಕ್ಷೇತ್ರಗಳಲ್ಲಿ ಬಿಜೆಪಿ ಸದೃಢವಾಗಿರುವುದರಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸೋಲಿನ ಭಯ ಕಾಡುತ್ತಿದೆ, ಜಿಲ್ಲೆಯಲ್ಲಿ ಬಿಜೆಪಿ ಸದೃಢವಾಗುತ್ತಿದೆ. ಹಾಗಾಗಿ ಕುಮಾರಸ್ವಾಮಿಗೆ ಯಾವ ಕ್ಷೇತ್ರದಲ್ಲಿಯೂ ಗೆಲ್ಲವು ಸಾಧ್ಯವಿಲ್ಲ. ಇದರಿಂದ ಹತಾಷರಾಗಿದ್ದಾರೆ.
ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ವಿಚಾರದಲ್ಲಿ ಜೆಡಿಎಸ್ ಜನರ ದಿಕ್ಕು ತಪ್ಪಿಸುತ್ತಿದೆ. ಕುಮಾರಣ್ಣ ಸಾಲ ಮನ್ನಾ ಮಾಡುತ್ತಾರೆ, ಇವರ ಮಾತು ನಂಬಿಕೊಂಡು ಜನರ ಆಸ್ತಿ ಹರಾಜಾಯಿತು ಎಂದು ಸಿಪಿವೈ ಟೀಕಿಸಿದರು.