ಮೈಸೂರು: ನೀವು ಮತದಾರ ಪಟ್ಟಿಯನ್ನೇ ಬದಲಿಸುತ್ತಿದ್ದೀರಲ್ಲ ನಾಚಿಕೆ ಆಗಲ್ವಾ? ಬಿಜೆಪಿಯವರು ಮತದಾರರ ಹಕ್ಕನ್ನೇ ಕಸಿಯಲು ಹೊರಟಿದ್ದಾರೆ. ಬಿಜೆಪಿಯ ಈ ನಡೆಯನ್ನು ನಾನು ಒಪ್ಪುವುದಿಲ್ಲ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಯಾಕಿಷ್ಟು ಸುಳ್ಳು ಹೇಳ್ತಿದ್ದೀರಿ. ಡಿಕೆಶಿ ಆಗಲಿ ಕಾಂಗ್ರೆಸ್ ಆಗಲಿ ಭಯೋತ್ಪಾದಕರ ಬೆನ್ನು ತಟ್ಟುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕರಂತೆ ಸ್ವಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದರು. ಮತದಾರರ ದತ್ತಾಂಶ ಕಳವು ಪ್ರಕರಣದಿಂದ ಜನರ ಗಮನ ಬೇರೆಡೆಗೆ ಸೆಳೆಯಲು ರಾಜ್ಯ ಬಿಜೆಪಿ ಸರ್ಕಾರ ಕುಕ್ಕರ್ ಬಾಂಬ್ ಸ್ಫೋಟ ಮಾಡಿಸಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.
ಚುನಾವಣೆಯೇ ಪ್ರಜಾಪ್ರಭುತ್ವದ ಆತ್ಮ. ಮತದಾರರ ಹಕ್ಕನ್ನೇ ಕಸಿಯಲು ಹೊರಟಿದ್ದೀರಿ. ಅದನ್ನ ಕೇಳಿದಾಗ ಇನ್ಯಾವುದನ್ನೋ ತಂದು ಬಿಟ್ಟು ಬಿಡ್ತಿರಿ, ನೀವೇ ಸುಮ್ಮನೆ ಮಾತನಾಡುತ್ತಿದ್ದೀರಿ ಎಂದು ಕಾಂಗ್ರೆಸ್ ನಾಯಕರ ಪರ ಬ್ಯಾಟಿಂಗ್ ಮಾಡಿದರು.
ಕಾಂಗ್ರೆಸ್ಗೆ ಹೋಗುವ ಸಂದರ್ಭ ಬಂದರೆ ಹೋಗುತ್ತೇನೆ. ಇಲ್ಲವಾದರೆ ಬಿಜೆಪಿಯಲ್ಲೇ ಇರುತ್ತೇನೆ. ಅದರಲ್ಲಿ ಏನಿದೆ? ಯಾವ ಪಕ್ಷದಲ್ಲಿದ್ರೂ ಅದರ ತಪ್ಪಿನ ಬಗ್ಗೆ ಮಾತಾಡುತ್ತೇನೆ. ನನ್ನ ಅಜೆಂಡಾದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದರು.