ಕುಷ್ಟಗಿ: ಬಿಜೆಪಿಯಲ್ಲಿ ಆರೆಸ್ಸೆಸ್‌ನವರು ಕೂರು ಅಂದರೆ ಕೂರಬೇಕು, ನಿಲ್ಲು ಅಂದರೆ ನಿಲ್ಲಬೇಕು. ಇವರಿಗೆಲ್ಲ ಮೋದಿ ಅವರು ಹೆಡ್ ಮಾಸ್ಟರ್, ಅಮಿತ್ ಶಾ ಅಸಿಸ್ಟೆಂಟ್ ಹೆಡ್ ಮಾಸ್ಟರ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ ,ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಬಿಜೆಪಿಯ ಯಾವ ನಾಯಕರಿಗೂ ಇವರಿಬ್ಬರ ಬಳಿ ಮಾತನಾಡುವ ಧೈರ್ಯ ಇಲ್ಲ. ಅವರು ಹೇಳಿದ್ದನ್ನಷ್ಟೇ ಕೇಳಿ ಬರಬೇಕು. ಇಂಥ ಸರ್ಕಾರ ನಮಗೆ ಬೇಕಾ ಎಂದು ಲೇವಡಿ ಮಾಡಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹತ್ತು ಕೆಜಿ ಅಕ್ಕಿ ಕೊಡಲಾಗುವುದು. ಒಂದು ವರ್ಷಕ್ಕೆ ಐದು ಸಾವಿರ ಕೋಟಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಖರ್ಚು ಮಾಡಲಾಗುವುದು. ಎಲ್ಲ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಒಂದೂವರೆ ಲಕ್ಷ ಕೋಟಿ ಅನುದಾನವನ್ನು ನೀರಾವರಿಗಾಗಿ ಮೀಸಲಿಡಲಾಗುವುದು ಎಂದರು.
ಬಿಜೆಪಿ ಸರ್ಕಾರವು ಸಾರ್ವಜನಿಕರಿಗೆ ಟೋಪಿ ಹಾಕಿದೆ, ಮೋಸ ಮಾಡುತ್ತಿದೆ. ರಾಜ್ಯದಲ್ಲಿ 40 ಪರ್ಸೆಂಟ್ ಸರ್ಕಾರ ಇದೆ ಎಂದು ಜನರೇ ಹೇಳುತ್ತಿದ್ದಾರೆ ಎಂದರು.15ನೇ ಹಣಕಾಸು ಆಯೋಗದಲ್ಲಿ ವಿಶೇಷ ನೆರವು .5,495 ಕೋಟಿಯನ್ನು ಕೇಂದ್ರದಿಂದ ಪಡೆಯಲು ಇವರಿಂದ ಆಗಲಿಲ್ಲ. ಒಂದು ವೇಳೆ ಪ್ರಶ್ನಿಸಿದ್ದರೆ ಅದೇ ದುಡ್ಡು ಕೋವಿಡ್ ಸಮಯದಲ್ಲಿ ಉಪಯೋಗಕ್ಕೆ ಬರುತ್ತಿತ್ತು ಎಂದು ಆರೋಪಿಸಿದರು.