ಕೋಲಾರ: ಕರ್ನಾಟಕ ಕಾಂಗ್ರೆಸ್ ಆಪರೇಷನ್ ಹಸ್ತ ನಡೆಸುತ್ತಿದೆ ಎಂಬ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕೋಲಾರ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ, ಬಿಜೆಪಿ ಸೇರಿಕೊಂಡಿದ್ದ 17 ಶಾಸಕರಿಗೆ ಕಾಂಗ್ರೆಸ್ ಕಿರುಕುಳ ನೀಡುವ ಉದ್ದೇಶ ಇಟ್ಟುಕೊಂಡಿದೆ ಎಂದರು.
ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರ ಕ್ಷೇತ್ರದಲ್ಲಿ ಕುಡಿಯುವ ನೀರಿನ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷಪಾತ ಮಾಡುತಿದ್ದಾರೆ. ಈ ಬಗ್ಗೆ ಸ್ವತಃ ಸೋಮಶೇಖರ್ ಅವರೇ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅವರು ಮಾತ್ರವಲ್ಲ, ವಿರೋಧ ಪಕ್ಷದ ಎಲ್ಲ ಶಾಸಕರಿಗೂ ಇದೇ ರೀತಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಡಿ.ಕೆ.ಶಿವಕುಮಾರ್ ಅವರು ಅಧಿಕಾರಿಗಳನ್ನು ಕೈಗೊಂಬೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಮಾತನಾಡಿದ್ರೆ, ವರ್ಗಾವಣೆಯ ಭಯ ಬೀಳಿಸುತ್ತಿದ್ದಾರೆ. ಕೋಲಾರದಲ್ಲಿ ಸಹ ಅಧಿಕಾರಿಗಳು ಶಿಷ್ಟಾಚಾರ ಪ್ರಕಾರ ನಡೆದುಕೊಳ್ಳುತಿಲ್ಲ ಎಂದು ಮುನಿಸ್ವಾಮಿ ಹೇಳಿದರು.
ಇದನ್ನೂ ಓದಿ: ಅಮಿತಾಭ್ ಕ್ಲಿಕ್ಕಿಸಿದ್ದ ತಂದೆಯ ಸ್ಪೆಷಲ್ ಫೋಟೋ ಹಂಚಿಕೊಂಡ ಪ್ರಿಯಾಂಕಾ
ಗ್ಯಾರಂಟಿ ಮೇಲೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಈಗ ವಿಧಾನಸಭೆ ವಿಸರ್ಜನೆ ಮಾಡಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 60 ಸ್ಥಾನಗಳ್ನೂ ಗೆಲ್ಲಲ್ಲ. ಕಾಂಗ್ರೆಸ್ ವಿರುದ್ಧ ಯಾರು ಮಾತಾಡುತ್ತಾರೋ ಅಂತಹವರ ವಿರುದ್ಧ ದ್ವೇಷ ಸಾಧಿಸುವ ಕೆಲಸ ನಡೆಯುತ್ತಿದೆ. ಕಿರುಕುಳ ಕೊಟ್ಟು ಬ್ಲ್ಯಾಕ್‌ಮೇಲ್ ಮಾಡುವುದನ್ನು ಕಾಂಗ್ರೆಸ್ ಬಿಡಬೇಕು. ಲೋಕಸಭೆ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಖರ್ಗೆ ಸ್ಪರ್ಧಿಸಿದ್ರೂ ಗೆಲ್ಲೋದು ಬಿಜೆಪಿ: ಕೋಲಾರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಆಹ್ವಾನ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುನಿಸ್ವಾಮಿ, ʼಕೋಲಾರದಲ್ಲಿ ಯಾರೇ ಅಭ್ಯರ್ಥಿಯಾದರೂ ಎದುರಿಸಲು ಸಿದ್ಧ. ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ಜನರೇ ನಿರ್ಧರಿಸಿದ್ದಾರೆ. ಇಲ್ಲಿ ಖರ್ಗೆ ಸೇರಿದಂತೆ ಯಾರೇ ಅಭ್ಯರ್ಥಿಯಾದರೂ ಬಿಜೆಪಿ ಗೆಲುವು ಖಚಿತ ಎಂದು ಮುನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.