ದೇವನಹಳ್ಳಿ: ಕರ್ನಾಟಕ ರಾಜ್ಯವು ಹಲವು ದಶಕಗಳಿಂದ ಬಿಜೆಪಿ ಭದ್ರಕೋಟೆಯಾಗಿದೆ ಎಂದು ಕೇಂದ್ರ ಸಚಿವ ಮತ್ತು ಕರ್ನಾಟಕ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಶಾಸಕ ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ 2023 ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ಹಿನ್ನೆಲೆ ಪ್ರಚಾರ ಕಾರ್ಯ, ಯಾತ್ರೆ ಯಾವ ರೀತಿ ನಡೆಸಬೇಕು ಎಂದು ಹಲವು ಸಲಹೆ ಸೂಚನೆ ನೀಡಲಾಗಿದೆ ಎಂದರು.
ಪಾಸಿಟಿವ್ ವಿಷಯಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಮಾಹಿತಿ ಜನರಿಗೆ ತಲುಪಬೇಕು, ತೀರಾ ವೈಯಕ್ತಿಕ ವಿಷಯಗಳನ್ನು ಟಾರ್ಗೆಟ್ ಮಾಡುವುದು ಬೇಡ ಕೇವಲ ಆಡಳಿತಾತ್ಮಕವಾಗಿ ಟಾರ್ಗೆಟ್ ಮಾಡಬೇಕು ಎಂದು ಸಲಹೆ ನೀಡಲಾಗಿದೆ.
ಬೆಂಗಳೂರಿನಲ್ಲಿ ನಮಗೆ ಅತಿ ಹೆಚ್ಚು ಸ್ಥಾನ ಗೆಲ್ಲುವ ಎಲ್ಲ ಅವಕಾಶಗಳಿದ್ದು, ಸರಿಯಾದ ದಿಕ್ಕಿನಲ್ಲಿ ಪ್ರಯತ್ನಿಸಬೇಕು ಅಷ್ಟೇ. ಬೆಂಗಳೂರಿನ ನೀವೆಲ್ಲರೂ ಸಮರ್ಥರು ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಿ ಬೆಂಗಳೂರಿನ ಸುತ್ತಮುತ್ತಲಿನ ಕ್ಷೇತ್ರಗಳತ್ತಲೂ ಗಮನ ಇರಲಿ ಎಂದು ಸೂಚಿಸಿದರು.