ಬೆಂಗಳೂರು : ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ ಮತ್ತು ಟೀಂ ಉದ್ಯಮಿಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಸಂಘಪರಿವಾರ ಮತ್ತು ಬಿಜೆಪಿ ನಾಯಕರಿಗೆ ಆರ್.ಎಸ್.ಎಸ್ ಸೂಚಿಸಿದೆ ಎಂದು ತಿಳಿದು ಬಂದಿದೆ.
ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಆರೋಪ ಚೈತ್ರಾ ಕುಂದಾಪುರ ಮೇಲಿದೆ. ಪ್ರಕರಣ ಈಗಾಗಲೇ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ವಿವಿಧ ರೀತಿಯ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ, ಬಿಜೆಪಿ ಮತ್ತು ಸಂಘ ಪರಿವಾರದ ಯಾವುದೇ ನಾಯಕರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದಂತೆ ಆರ್.ಎಸ್.ಎಸ್ ಆದೇಶ ನೀಡಿದೆ ಎನ್ನಲಾಗ್ತಿದೆ.
ಕಾರ್ಯಕ್ರಮಗಳಿಗೆ ಆಹ್ವಾನಿಸದಂತೆ ಸೂಚನೆ : ಚೈತ್ರಾ ಕುಂದಾಪುರ ‘ಹಿಂದುತ್ವದ ಫೈರ್ ಬ್ರ್ಯಾಂಡ್’ ಎಂದು ಗುರುತಿಸಿಕೊಂಡಿದ್ದರು. ಆಕೆಯನ್ನು ‘ಹಿಂದೂ ಹುಲಿ’ ಎಂದು ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಬಿಂಬಿಸಿದ್ದರು. ಆದರೆ, ಚೈತ್ರಾ ವಂಚನೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಹಿನ್ನೆಲೆ, ಮುಂದೆ ಆಕೆಯನ್ನು ಬಿಜೆಪಿ, ಸಂಘ ಪರಿವಾರದ ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನಿಸದಂತೆ ಆರ್.ಎಸ್.ಎಸ್ ತಾಕೀತು ಮಾಡಿದೆಯಂತೆ. ಆರೋಪಿಯನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸಿ, ಆಕೆಯ ಪರ ವಹಿಸಿಕೊಂಡು ಮಾತನಾಡಿದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗಲಿದೆ. ಹಾಗಾಗಿ, ಚೈತ್ರಾಳಿಂದ ಅಂತರ ಕಾಯ್ದುಕೊಳ್ಳುವಂತೆ ಆರ್.ಎಸ್.ಎಸ್ ಖಡಕ್ ಸಂದೇಶ ನೀಡಿದೆ ಎಂಬ ಮಾಹಿತಿ ದೊರೆತಿದೆ.
ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬವರಿಂದ ಹಣ ಪಡೆದು ವಂಚಿಸಿದ ಆರೋಪ ಚೈತ್ರಾ ಮತ್ತು ಆಕೆಯ ತಂಡದ ಮೇಲಿದೆ. ಈ ಬಗ್ಗೆ ಗೋವಿಂದ ಬಾಬು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಆರಂಭದಲ್ಲಿ ಇಬ್ಬರು ಆರೋಪಿಗಳಾದ ಗಗನ್ ಕಡೂರು ಮತ್ತು ಪ್ರಸಾದ್ ಎಂಬುವವರನ್ನು ಬಂಧಿಸಿದ್ದರು.
ಇದನ್ನೂ ಓದಿ : ವಂಚನೆ ಕೇಸ್ಗೆ ಟ್ವಿಸ್ಟ್ : ಇಂದಿರಾ ಕ್ಯಾಂಟೀನ್ ಹೆಸರೇಳಿದ್ದೇಕೆ ಚೈತ್ರಾ ಕುಂದಾಪುರ?
ತಲೆ ಮರೆಸಿಕೊಂಡಿದ್ದ ಆರೋಪಿಗಳಾದ ಚೈತ್ರಾ ಮತ್ತು ಶ್ರೀಕಾಂತ್ ನಾಯಕ್ ಪೆಲತ್ತೂರು ಎಂಬವರನ್ನು ಸೆಪ್ಟೆಂಬರ್ 12ರಂದು ಉಡುಪಿಯ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ವಶಕ್ಕೆ ಪಡೆದ ಸಿಸಿಬಿ ಪೊಲೀಸರು, ಬೆಂಗಳೂರಿಗೆ ಕರೆತಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಚೈತ್ರಾ ಸೇರಿದಂತೆ ಆರೋಪಿಗಳನ್ನು 10 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.