ಚಾಮರಾಜನಗರ : ಜಿಲ್ಲೆಯಲ್ಲಿ ನಡೆದಿರುವ ದಲಿತ ಯುವಕ ದಡದಹಳ್ಳಿ ರಮೇಶ್ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರ ಪಾತ್ರ ಇರುವ ಬಗ್ಗೆ ಅನುಮಾನ ಇದೆ ಎಂದು ಬಿಜೆಪಿ ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮೂಡ್ನಾಕೂಡು ಪ್ರಕಾಶ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿಂದು ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ವ್ಯಕ್ತಿ ದಡದಹಳ್ಳಿ ರಮೇಶ್ ಕೊಲೆಯಾಗಿದೆ, ಪ್ರಕರಣದ ರಾಜೀ ಪಂಚಾಯತಿ ಮಾಡುವ ಸಮಯದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಭಾಗಿಯಾಗಿದ್ದರು, ಹೀಗಾಗಿ ಪ್ರಕರಣ ಮುಚ್ಚಿಹಾಕುವುದರಲ್ಲಿ ಶಾಸಕರ ಪಾತ್ರ ಇರುವ ಬಗ್ಗೆ ಅನುಮಾನ ಇದೆ, ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಸತ್ಯಾ ಸತ್ಯತೆ ಬಯಲಾಗಲಿದೆ ಎಂದು ಒತ್ತಾಯಿಸಿದರು.
ಇದನ್ನೂ ಓದಿ : EXCLUSIVE – ನಾವು ಇಂದಿರಾ ಕ್ಯಾಂಟೀನ್ ಬಿಲ್ ಬಾಕಿ ಉಳಿಸಿಕೊಂಡಿಲ್ಲ : ತುಷಾರ್ ಗಿರಿನಾಥ್
ಈಗ ನಡೆಯುತ್ತಿರುವ ತನಿಖೆಯ ಮೇಲೆ ನಮಗೆ ನಂಬಿಕೆ ಇಲ್ಲ, ಆದ್ದರಿಂದ ಪ್ರಕರಣದ ತನಿಖೆಯನ್ನು ಸರ್ಕಾರ ಸಿಬಿಐಗೆ ವಹಿಸಬೇಕು. ದಲಿತರ ಮತ ಪಡೆದು ಅಧಿಕಾರಕ್ಕೆ ಬಂದ ಸರ್ಕಾರ ದಲಿತರಿಗೆ ಮೋಸ ಮಾಡುತ್ತಿದೆ, ಸಚಿವ ಡಿ.ಸುಧಾಕರ್ ದಲಿತರ ಮೇಲೆ ದೌರ್ಜನ್ಯ ಎಸಗಿದ್ದಾರೆ, ಅವರ ವಿರುದ್ದ ಅಟ್ರಾಸಿಟಿ ಕೇಸ್ ದಾಖಲಾಗಿದೆ, ಆದರೆ ಅವರನ್ನು ಬಂಧಿಸುವ ಬದಲು ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ದೂರಿದರು.
ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಕೂಡ ದಲಿತರ ಅವಹೇಳನ ಮಾಡಿದ್ದಾರೆ, ಆರೋಪಿಗಳನ್ನು ಸಮರ್ಥಿಸಿಕೊಳ್ಳುತ್ತಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಸುಳ್ಳು ಅಟ್ರಾಸಿಟಿ ಕೇಸ್ ಕೊಟ್ಟಿದ್ದಾರೆ ಎನ್ನುವ ಮೂಲಕ ದಲಿತರಿಗೆ ಅವರು ಅಪಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಕೇವಲ ಗೂಂಡಾಗಳೇ ಇದ್ದಾರೆ ಎಂದು ಗುರುತರವಾಗಿ ಆರೋಪಿಸಿದ್ದಾರೆ.


ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ, ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ಡಿ.ಸುಧಾಕರ್ ಅವರನ್ನು ಬಂಧಿಸಬೇಕು. ಸಚಿವರಾದ ಡಿಕೆ ಶಿವಕುಮಾರ್, ಎಸ್.ಎಸ್ ಮಲ್ಲಿಕಾರ್ಜುನ್ ಅವರನ್ನು ಸಂಪುಟದಿಂದ ವಜಾ ಮಾಡಬೇಕು. ದಲಿತರನ್ನು ಪ್ರತಿನಿಧಿಸುವ ಡಾ.ಜಿ ಪರಮೇಶ್ವರ್ ಅರೋಪಿತರ ಬಂಧನಕ್ಕೆ ಆದೇಶಿಸಬೇಕು, ಇಲ್ಲದಿದ್ದರೆ ಡಾ.ಜಿ ಪರಮೇಶ್ವರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಸಂವಿಧಾನದ ಉಲ್ಲಂಘನೆ ಆಗುತ್ತಿದೆ, ಸಂವಿಧಾನದ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಪ್ರಕಾಶ್ ಸರ್ಕಾರಕ್ಕೆ ಒತ್ತಾಯ ಮಾಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.