ಬೆಂಗಳೂರು : ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ, ಕಾರ್ಯತಂತ್ರ ರೂಪಿಸುವ ಸಲುವಾಗಿ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ಕರೆಯಲಾಗಿದೆ.
ಇಂದು ಬೆಳಿಗ್ಗೆ 10:30ಕ್ಕೆ ನಗರದ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸಭೆ ಆಯೋಜಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಭೆಯ ನೇತೃತ್ವ ವಹಿಸಲಿದ್ದಾರೆ. ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ ಸದಾನಂದಗೌಡ ಸೇರಿದಂತೆ ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಭೆಯಲ್ಲಿ ಯಾವೆಲ್ಲ ವಿಚಾರ ಚರ್ಚೆ?
- ಲೋಕಸಭೆ ಚುನಾವಣೆಗೆ ಜೆಡಿಎಸ್ ಜೊತೆಗಿನ ಮೈತ್ರಿ ವಿಚಾರ
- ಬಿಎಸ್‌ವೈ ರಾಜ್ಯಪ್ರವಾಸದ ರೂಪುರೇಷೆ, ವೇಳಾಪಟ್ಟಿ
- ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ವರೆಗೆ ನಡೆಯಲಿರುವ ‘ಸೇವಾ ಪ್ರಾಕ್ಷಿಕ್’ ಸಿದ್ದತೆ
- ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನ ಆಯ್ಕೆ ಸಂಬಂಧ ಅಭಿಪ್ರಾಯ ಸಂಗ್ರಹ ವಿಚಾರ
- ಕೆಲ ಬಿಜೆಪಿ ನಾಯಕರು ಪಕ್ಷಾಂತರ ಮಾಡಲಿದ್ದಾರೆ ಎಂಬ ವಿಚಾರ
- ಪಕ್ಷ ಸಂಘಟನೆ ಮತ್ತು ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಪಡೆ ಆಕ್ಟೀವ್
- ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ
ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ಪಕ್ಷದ ಸಾರಥ್ಯ ವಹಿಸಿದ ಬಳಿಕ ಮೊದಲ ಬಾರಿಗೆ ರಾಜ್ಯ ನಾಯಕರ ಸಭೆ ನಡೆಯುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಲು ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿದ್ದೇ ಕಾರಣ ಎಂಬ ಮಾತುಗಳು ಬಿಜೆಪಿ ಆಂತರಿಕ ವಲಯದಲ್ಲಿ ಕೇಳಿ ಬಂದಿತ್ತು. ಈ ಹಿನ್ನೆಲೆ ಹೈಕಮಾಂಡ್ ಹೊಸ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನ ಆಯ್ಕೆ ನಡೆಯುವವರೆಗೆ ಪಕ್ಷದ ಉಸ್ತವಾರಿ ನೋಡಿಕೊಳ್ಳುವಂತೆ ಯಡಿಯೂರಪ್ಪ ಅವರಿಗೆ ಸೂಚಿಸಿದೆ ಎನ್ನಲಾಗಿದೆ. ಹಾಗಾಗಿ, ಇತ್ತೀಚಿನ ಬಿಜೆಪಿಯ ಎಲ್ಲಾ ಕಾರ್ಯಕ್ರಮಗಳಲ್ಲಿ ಯಡಿಯೂರಪ್ಪ ಮುಂದಿನ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.