Wednesday, November 29, 2023
spot_img
- Advertisement -spot_img

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವುದೇ ನನ್ನ ಆದ್ಯತೆ: ವಿಜಯೇಂದ್ರ

ಬೆಂಗಳೂರು: 2024ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸುವುದೇ ನನ್ನ ಆದ್ಯತೆ ಎಂದು ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಈ ಬಗ್ಗೆ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ವಿಜಯೇಂದ್ರ, ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್, ಪ್ರಲ್ಹಾದ್ ಜೋಶಿ, ಬಸನಗೌಡ ಪಾಟೀಲ್ ಯತ್ನಾಳ್, ಮತ್ತು ವಿ ಸೋಮಣ್ಣ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಬುಧವಾರ ರಾಜ್ಯ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರ ಬಗ್ಗೆ ಸಮರ್ಥನೆ ನೀಡಿದ್ದಾರೆ.

ನನಗೆ ಮೊದಲ ಶುಭಾಶಯ ಕೋರಿದವರು ಸಚಿವ ಪ್ರಹ್ಲಾದ್ ಜೋಶಿ ಮತ್ತು ಬಿಎಲ್ ಸಂತೋಷ್. ಅವರು ಪಕ್ಷದ ಅತ್ಯಂತ ಉನ್ನತ ನಾಯಕರುಗಳು. ನಾಯಕರಾದ ವಿ.ಸೋಮಣ್ಣ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಇದನ್ನೂ ಓದಿ: ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಭೇಟಿ ಮಾಡಿದ ಬಿ.ವೈ. ವಿಜಯೇಂದ್ರ‌

ಇನ್ನು ಮುಂದುವರೆದು ಮಾತನಾಡಿದ ವಿಜಯೇಂದ್ರ, ಯಾರಾದರೂ ನನ್ನನ್ನು ವಿರೋಧಿಸಿದರೆ, ಅವರು ಮೋದಿಯನ್ನು ವಿರೋಧಿಸಿದಂತೆ ಎಂದು ಶಿಕಾರಿಪುರದ 47 ವರ್ಷದ ಶಾಸಕ ವಿಜಯೇಂದ್ರ ತಿಳಿಸಿದ್ದಾರೆ. ಬಿಜೆಪಿ ನಾಯಕ ಅರವಿಂದ್ ಬೆಲ್ಲದ್ ಕಾರ್ಯಕ್ರಮಕ್ಕೆ ಬರಲಿಲ್ಲ, ಆದರೆ ನಾನು ಅವರೊಂದಿಗೆ ಮಾತನಾಡಿದ್ದೇನೆ, ಅವರು ನನಗೆ ವಿಶ್ ಮಾಡಿದ್ದಾರೆ. ಹಲವು ನಾಯಕರನ್ನು ಭೇಟಿ ಮಾಡಿದ್ದೇನೆ. ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಭೇಟಿ ನೀಡಿದ್ದೆ.ಇತ್ತೀಚೆಗಷ್ಟೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೂ ಪಕ್ಷದ ಕಚೇರಿಗೆ ಬಂದು ಆಶೀರ್ವಾದ ಮಾಡಿದರು. ನನ್ನನ್ನು ಆಶೀರ್ವದಿಸುವುದು ಅವರ ಕರ್ತವ್ಯ ಎಂದು ಬೊಮ್ಮಾಯಿ ಹೇಳಿದರು ಎಂದು ತಿಳಿಸಿದ್ದಾರೆ.

ನನ್ನನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದವರು ಯಾರು? ಯಡಿಯೂರಪ್ಪನಾ? ಅದು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ. ಕರ್ನಾಟಕದ ಎಲ್ಲಾ 28 ಸೀಟುಗಳನ್ನು ಗೆದ್ದು ಮೋದಿ ಅವರಿಗೆ ತಲುಪಿಸುವುದು ನನ್ನ ಕೆಲಸ. ಯಾರಾದರೂ ನನ್ನನ್ನು ವಿರೋಧಿಸಿದರೆ ಅವರು ಮೋದಿಯನ್ನು ವಿರೋಧಿಸಿದಂತೆ ಎಂದಿದ್ದಾರೆ.

ಈ ತಿಂಗಳ 23, 24, 25 ರಂದು ನವದೆಹಲಿಗೆ ಭೇಟಿ ನೀಡಿ ಮೋದಿ, ಶಾ ಮತ್ತು ನಡ್ಡಾ ಅವರನ್ನು ಭೇಟಿ ಮಾಡುವುದಾಗಿ ವಿಜಯೇಂದ್ರ ಹೇಳಿದರು. ನವೆಂಬರ್ 25 ರಂದು ಬೆಂಗಳೂರಿನಲ್ಲಿ ತಮ್ಮ ಬೆಂಬಲಿಗರು ಸಂಭ್ರಮಾಚರಣೆ ಸಭೆ ನಡೆಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ, ಇನ್ನೂ ಯಾವುದನ್ನೂ ನಿರ್ಧರಿಸಲಾಗಿಲ್ಲ ಎಂದು ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ಇದನ್ನೂ ಓದಿ: ಇಂದು ಫೈನಲ್ ಆಗುತ್ತಾ ವಿಪಕ್ಷ ನಾಯಕನ ಹೆಸರು?; ಶಾಸಕಾಂಗ ಸಭೆ ಕರೆದ ವಿಜಯೇಂದ್ರ!

ಮೋದಿ ಪರವಾದ ಅಲೆ ಇದೆ. ಕೆಲವು ಅರೆಬೆಂದ ಗ್ಯಾರಂಟಿಗಳನ್ನು ಹೊರತುಪಡಿಸಿದರೆ ಕಾಂಗ್ರೆಸ್ ಸರ್ಕಾರ ಏನು ನೀಡುತ್ತದೆ? ಜನರು ನಿರಾಸೆಗೊಂಡಿದ್ದಾರೆ . ಕೇಂದ್ರವನ್ನು ದೂಷಿಸುವುದನ್ನು ಬಿಟ್ಟು ರಾಜ್ಯ ಸರ್ಕಾರ ಯಾವ ಹೊಸ ಕಾರ್ಯಕ್ರಮವನ್ನು ರಾಜ್ಯಕ್ಕೆ ನೀಡಿದೆ? ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles