ಬೆಂಗಳೂರು: 2023ರ ವಿಧಾನಸಭಾ ಚುನಾವಣೆಗೆ ದಿನಗಣನೆ ಹತ್ತಿರವಾಗ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇನ್ನು ರಾಜ್ಯ ರಾಜಕೀಯದಲ್ಲಿ ಜಿದ್ದಾಜಿದ್ದಿನ ಅಖಾಡ ಎಂದೇ ಗುರುತಿಸಿಕೊಂಡಿರುವ ಜಯನಗರದಲ್ಲಿ ಚುನಾವಣಾ ಕಾವು ಕೊಂಚ ಜೋರಾಗಿಯೇ ಇದೆ. ಬೆಂಗಳೂರಿನ ಶ್ರೀಮಂತ ಬಡಾವಣೆಗಳಲ್ಲಿ ಒಂದು ಎಂಬ ಖ್ಯಾತೆಯ ಜೊತೆಗೆ ಏಷ್ಯಾದ ಅತಿ ದೊಡ್ಡ ಬಡಾವಣೆಗಳಲ್ಲಿ ಒಂದು ಎಂಬ ಹಿರಿಮೆ ಜಯನಗರಕ್ಕಿದೆ. ಆದ್ರೆ ಅಭಿವೃದ್ಧಿ ಮಾತ್ರ ಅಷ್ಟಕ್ಕಷ್ಟೇ ಅನ್ನೋದು ಜನರ ಮಾತು. ಈ ಹಿಂದೆ ಕೇಸರಿ ಕೋಟೆಯಾಗಿದ್ದ ಜಯನಗರದಲ್ಲಿ ಕಳೆದಬಾರಿ ಬಿಜೆಪಿ ನಾಯಕರ ನಿರ್ಲಕ್ಷ್ಯದಿಂದ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು. ಮತ್ತೆ ಅಧಿಕಾರ ಮುಂದುವರಿಸೋ ಇರಾದೆ ಕಾಂಗ್ರೆಸ್‌ಗೆ ಇದ್ದರೆ, ಬಿಜೆಪಿ ಮತ್ತೆ ಮರಳಿ ಜಯನಗರದಲ್ಲಿ ಕಮಲ ಅರಳಿಸೋಕೆ ಪ್ಲಾನ್ ಮಾಡಿದೆ. ಈ ಹಿನ್ನೆಲೆಯಲ್ಲಿ ಅಳೆದೂ ತೂಗಿ ಜಯನಗರದಿಂದ ಜನಾನುರಾಗಿಯಾದ, ಪ್ರಬುದ್ಧ ಅಭ್ಯರ್ಥಿಯನ್ನ ಅಖಾಡಕ್ಕಿಳಿಸಲು ಮುಂದಾಗಿದೆ ಕಮಲಪಾಳೆಯ. ಸದ್ಯ ಬಿಜೆಪಿ ಟಿಕೆಟ್ ರೇಸ್‌ನಲ್ಲಿ ಬಿ.ಎನ್. ಪ್ರಹ್ಲಾದ್, ಸಿ.ಕೆ.ರಾಮಮೂರ್ತಿ, ಎನ್.ಆರ್.ರಮೇಶ್ ಹಾಗೂ ನಟಿ, ನಿರ್ದೇಶಕಿ, ನಿರ್ಮಾಪಕಿ ಹಾಗೂ ಬರಹಗಾರ್ತಿ ಆಗಿರುವ ರೂಪಾ ಅಯ್ಯರ್ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.
ಬಿಜೆಪಿ ಚಿತ್ತ ರೂಪಾ ಅಯ್ಯರ್‌ನತ್ತ..!?
ಈಗಾಗಲೇ ಗುಜರಾತ್‌ನಲ್ಲಿ ಪ್ರಚಂಡ ಗೆಲುವು ಸಾಧಿಸಿರುವ ಬಿಜೆಪಿ ಅದೇ ಮಾದರಿಯನ್ನ ಕರ್ನಾಟಕದಲ್ಲೂ ತರಲು ಮುಂದಾಗಿದ್ದು, ಹಲವು ಹಿರಿತಲೆಗಳಿಗೆ ಟಿಕೆಟ್ ಕೈ ತಪ್ಪುವ ಭಯವಿದೆ. ಆ ನಿಟ್ಟಿನಲ್ಲಿ ಜಯನಗರದಿಂದ ರೂಪಾ ಅಯ್ಯರ್‌ಗೆ ಮಣೆ ಹಾಕಿ ಕೇಸರಿ ಪತಾಕೆ ಹಾರಿಸುವ ಪ್ಲಾನ್ ನಡೆಸುತ್ತಿದೆ ಎನ್ನಲಾಗಿದೆ. ಈಗಾಗಲೇ ಜಯನಗರದಲ್ಲಿ ರಾಮಲಿಂಗಾರೆಡ್ಡಿ ಕುಟುಂಬ ಬಲವಾಗಿ ಬೇರೂರಿದ್ದು, ಕಳೆದ ಚುನಾವಣೆಯಲ್ಲಿ ಗೆದ್ದು ಶಾಸಕಿಯಾಗಿರುವ ಸೌಮ್ಯರೆಡ್ಡಿಯನ್ನ ಎದುರಿಸಲು ರೂಪಾ ಅಯ್ಯರನ್ನ ಅಖಾಡಕ್ಕಿಳಿಸುವ ಸಾಧ್ಯತೆಯಿದೆ. ಅರ್ಹತೆಯಲ್ಲೂ ರೂಪಾ ಅಯ್ಯರ್ ಸೌಮ್ಯಾ ರೆಡ್ಡಿಯವರಿಗಿಂತ ಒಂದು ಕೈ ಮೇಲೆ ಎನ್ನುವ ಕಾರಣಕ್ಕೆ ಸಿ.ಕೆ.ರಾಮಮೂರ್ತಿ ಹಾಗೂ ಎನ್.ಆರ್.ರಮೇಶ್ ಅವರಿಗೆ ಬೇರೆ ಬೇರೆ ಜವಾಬ್ದಾರಿಗಳನ್ನ ನೀಡಿ ರೂಪಾ ಅಯ್ಯರ್‌ರನ್ನ ಕಣಕ್ಕಿಳಿಸುವ ಸಾಧ್ಯತೆ ಇದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ತತ್ವ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ರೂಪಾ ಅಯ್ಯರ್, ಕಲಾ ಸೇವೆಯ ಜೊತೆಗೆ ಸಮಾಜ ಸೇವೆಯಲ್ಲೂ ಹೆಸರಾಗಿದ್ದಾರೆ. ಮೇಲಾಗಿ 2011ರಲ್ಲಿ ಯಂಗ್ ಲೀಡರ್ ಹಾಗೂ ನಾಟ್ಯ ಕಲಾವಿನೇತ್ರಿ ಪ್ರಶಸ್ತಿ ಅಲ್ಲದೇ 2010ಲ್ಲಿ ಯುಕೆಯಲ್ಲಿ ಇಂಡಿಯನ್ ಅಚೀವರ್ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳನ್ನ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಮಹಿಳಾ ಅಭ್ಯರ್ಥಿಯನ್ನ ಎದುರಿಸಲು ಪ್ರಬಲ ಮಹಿಳಾ ಅಭ್ಯರ್ಥಿಯನ್ನೆ ಅಖಾಡಕ್ಕಿಳಿಸೋದು ಬಿಜೆಪಿಯ ಮಾಸ್ಟರ್‌ಪ್ಲಾನ್. ಇನ್ನು ಕಳೆದ ಚುನಾವಣೆಯಲ್ಲಿ ಕೇವಲ 1834 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಿ.ಎನ್. ಪ್ರಹ್ಲಾದ್ ಸೋಲನುಭವಿಸಿದ್ದರು. ಬಿಜೆಪಿ ನಾಯಕರ ನಿರ್ಲಕ್ಷ್ಯವೇ ಈ ಸೋಲಿಗೆ ಕಾರಣ ಎನ್ನಲಾಗಿತ್ತು. ಈ ಕಳಂಕವನ್ನ ತೊಳೆದುಕೊಳ್ಳಲು ಹಾಗೂ ಕಳೆದುಕೊಂಡ ಕ್ಷೇತ್ರದ ಮೇಲಿನ ಹಿಡಿತವನ್ನ ಮತ್ತೆ ಸಾಧಿಸಲು ಅಳೆದು ತೂಗಿ ಲೆಕ್ಕಾಚಾರ ಹಾಕಿರುವ ಬಿಜೆಪಿ ರೂಪಾ ಅಯ್ಯರ್‌ರತ್ತ ಚಿತ್ತ ನೆಟ್ಟಿದೆ. ಒಂದು ವೇಳೆ ಅಂದುಕೊಂಡಂತೆ ಬಿಜೆಪಿ ರೂಪಾ ಅಯ್ಯರ್‌ಗೆ ಮಣೆ ಹಾಕಿದ್ದೇ ಆದಲ್ಲಿ ಜಯನಗರದಲ್ಲಿ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲಿದೆ.