ಬೆಂಗಳೂರು: ಇವತ್ತು ಅಥವಾ ನಾಳೆಯೊಳಗೆ ವಿಪಕ್ಷ ನಾಯಕನ ಆಯ್ಕೆ ಮಾಡ್ತಾರೆ, ನಾವು ಆ ಕಡೆಯೂ ಗಮನ ಕೊಟ್ಟಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.
ಈ ಬಗ್ಗೆ ನಗರದಲ್ಲಿ ಮಾತನಾಡಿದ ಬಿಎಸ್‌ವೈ (BS Yediyurappa), ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ‘ಸಚಿವ ಶಿವಾನಂದ ಪಾಟೀಲ್ (Shivanand Patil) ಮಾತು ಅವರಿಗೆ ಶೋಭೆ ತರುವುದಿಲ್ಲ, ಅವರ ಮಾತನ್ನು ನಾನು ಖಂಡಿಸುತ್ತೇನೆ. ಈ ರೀತಿಯ ಬೇಜವಬ್ದಾರಿ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ’ ಎಂದರು.
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ‘ನಾಳೆ ಬೆಂಗಳೂರಿನಲ್ಲಿ ಈ ಸರ್ಕಾರದ ಆಡಳಿತ ವೈಫಲ್ಯ, ಬರಗಾಲ ತಾಂಡವ, ಅಭಿವೃದ್ಧಿ ಸ್ಥಗಿತದ ಕುರಿತು ರಾಜ್ಯದಾದ್ಯಂತ ಪ್ರತಿಭಟನೆ ಮಾಡುತ್ತಿದ್ದೇವೆ. ಸಿದ್ದರಾಮಯ್ಯ (Siddaramaiah) ಮತ್ತು ಡಿಕೆಶಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅಭಿವೃದ್ಧಿ ಕಡೆಗಣನೆ ಮಾಡಿದ್ದಾರೆ. ರಾಜ್ಯದಲ್ಲಿ ಬರಗಾಲದಿಂದ ಜನರಿಗೆ, ದನಕರುಗಳಿಗೆ ನೀರಿಲ್ಲ. ಬರಗಾಲ ಎಂದು ಘೋಷಣೆ ಮಾಡೋದ್ರಲ್ಲಿ ಸರ್ಕಾರ ಹಿಂದೆ ಮುಂದೆ ನೋಡ್ತಿದೆ’ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ; ‘ಹೆಸರಲ್ಲ.. ಮೊದಲು ದೇಶದ ಹಣೆಬರಹ ಚೇಂಜ್ ಮಾಡಿ’
‘ನಮಗೆ ನೀರಿಲ್ಲ, ಆದ್ರೆ ತಮಿಳು ನಾಡಿಗೆ 5 ಸಾವಿರ ಕ್ಯುಸೆಕ್ ನೀರು ಕೊಡ್ತಿದ್ದಾರೆ. ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಸೋದ್ರಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ; ಶಾಸಕರಿಗೆ ಅನುದಾನ ಕೊಡ್ತಿಲ್ಲ, ನಮ್ಮ ಸರ್ಕಾರ ರೈತರಿಗೆ ಕೊಡ್ತಿದ್ದ ₹4 ಸಾವಿರ ಹಣವನ್ನು ಕೂಡ ನೀಡ್ತಿಲ್ಲ. ಎನ್‌ಇಪಿ ರದ್ದು ಮಾಡಿದ್ದಾರೆ, ಬಿಜೆಪಿ ಕಾರ್ಯಕರ್ತರ ಮೇಲೆ ಅನಾವಶ್ಯಕ ಕೇಸ್ ದಾಖಲು ಮಾಡ್ತಿದ್ದಾರೆ. ನಾಳಿನ ಪ್ರತಿಭಟನೆಯಲ್ಲಿ ಎಲ್ಲ ಕಾರ್ಯಕರ್ತರು, ಮುಖಂಡರು ಸೇರುತ್ತಿದ್ದಾರೆ. ಸರ್ಕಾರಕ್ಕೆ ಸಮಯ ಕೊಟ್ಟಿದ್ರೂ ಅಭಿವೃದ್ಧಿಗೆ ಮುಂದಾಗಿಲ್ಲ. ಹಾಗಾಗಿ, ಪ್ರತಿಭಟನೆ ಮಾಡುತ್ತಿದ್ದೆವೆ, ಇದು ಆರಂಭ ಅಷ್ಟೇ. ಕಾನೂನು ಸುವ್ಯವಸ್ಥೆಯಲ್ಲಿ ಅವ್ಯವಸ್ಥೆ ಆದ್ರೆ ಅದಕ್ಕೆ ಸರ್ಕಾರವೇ ನೇರ ಹೊಣೆ’ ಎಂದು ಎಚ್ಚರಿಕೆ ನೀಡಿದರು.
ಬಿಎಸ್‌ವೈ ಜೈಲಿಗೆ ಹೋಗಲು ಪಕ್ಷದವರೆ ಕಾರಣ ಎಂಬ ಎಂ.ಪಿ. ರೇಣುಕಾಚಾರ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ‘ನಾನು ಅದರ ಬಗ್ಗೆ ಚರ್ಚೆ ಮಾಡಲ್ಲ, ರೇಣುಕಾಚಾರ್ಯ ಹತ್ರ ಕೂಡ ಮಾತನಾಡಿದ್ದೇನೆ. ಯಾರು ಯಾವುದಕ್ಕೂ ಕೂಡ ಕಾರಣವಲ್ಲ. ಪಕ್ಷ ಕಟ್ಟುವ, ಬೆಳೆಸುವ ಅವಶ್ಯಕತೆ ಇದೆ. ಆ ಬಗ್ಗೆ ಕೆಲಸ ಮಾಡೋಣ’ ಎಂದು ರೇಣುಕಾಚಾರ್ಯ ಆರೋಪವನ್ನು ಬಿಎಸ್‌ವೈ ತಳ್ಳಿ ಹಾಕಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.