ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿದ್ದ ಹಲವು ಹಾಲಿ ಸಚಿವರು ಸೋಲುಂಡು ಬಿಜೆಪಿಗೆ ಶಾಕ್ ನೀಡಿದ್ದಾರೆ.
ಆರೋಗ್ಯ ಸಚಿವ ಡಾ.ಕೆ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಸ್ಪರ್ಧಿಸಿ ಗೆದ್ದಿದ್ದಾರೆ. ಅಲ್ಲದೇ ಹಿರೇಕೆರೂರು ಕ್ಷೇತ್ರದಲ್ಲಿ ಬಿ.ಸಿ. ಪಾಟೀಲ್, ಹೊಸಕೋಟೆ ಕ್ಷೇತ್ರದ ಎಂಟಿಬಿ ನಾಗರಾಜ, ಚಾಮರಾಜನಗರ ಮತ್ತು ವರುಣಾ ಕ್ಷೇತ್ರದಲ್ಲಿ ವಿ.ಸೋಮಣ್ಣ, ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಜೆ.ಸಿ ಮಾಧುಸ್ವಾಮಿ, ಬೀಳಗಿ ಕ್ಷೇತ್ರದಿಂದ ಮುರುಗೇಶ್ ನಿರಾಣಿ, ಕನಕಪುರ ಕ್ಷೇತ್ರದಿಂದ ಆರ್.ಅಶೋಕ್ ಸೋತಿದ್ದಾರೆ. ಆರ್. ಅಶೋಕ್ ಕನಕಪುರದಿಂದ ಸೋತರೆ, ಪದ್ಮನಾಭನಗರ ಮತಕ್ಷೇತ್ರದಿಂದ ಗೆದ್ದಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಎಸ್ಟಿ ಸೋಮಶೇಖರ್ ಗೆಲುವು ಸಾಧಿಸಿದ್ದಾರೆ. ಕೆ.ಆರ್ ಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ ನಾರಾಯಣಗೌಡ ಕೂಡ ಅಚ್ಚರಿ ಎನ್ನುವಂತೆ ಸೋಲು ಕಂಡಿದ್ದಾರೆ. ಬಿಜೆಪಿ ಪಕ್ಷದ ಪ್ರಭಾವಿ ಸಚಿವರಾಗಿದ್ದ ಬಳ್ಳಾರಿ ಗ್ರಾಮಾಂತರ ಅಭ್ಯರ್ಥಿ ಬಿ.ಶ್ರೀರಾಮುಲು ಕೂಡ ಸೋಲುವ ಮೂಲಕ ಪಕ್ಷಕ್ಕೆ ಶಾಕ್ ನೀಡಿದ್ದಾರೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಸೋಲು ಕಂಡಿದ್ದಾರೆ. ಸಿ. ಟಿ. ರವಿ 55678 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.