ಯಾದಗಿರಿ : ಒಂದೆರಡು ತಿಂಗಳಲ್ಲಿ ವಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷನ ಆಯ್ಕೆ ಮಾಡ್ತಾರೆ ಎಂದು ಮಾಜಿ ಸಚಿವ ರಾಜುಗೌಡ ಹೇಳಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಲೇಟ್ ಆಗಿಯಾದ್ರೂ ಲೇಟೆಸ್ಟ್ ಆಗಿ ಒಳ್ಳೆಯ ನಾಯಕನ ಆಯ್ಕೆಗಾಗಿ ಬಿಜೆಪಿಗರು ಆಲೋಚನೆ ಮಾಡ್ತಿದ್ದಾರೆ ಎಂದು ಬಿಜೆಪಿ ವಿಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ವಿಳಂಬ ವಿಚಾರವಾಗಿ ಪ್ರತಿಕ್ರಿಯಿಸಿದರು.
ಬಾಂಬೆ ಬಾಯ್ಸ್ ಘರ್ ವಾಪ್ಸಿ ವಿಚಾರವಾಗಿ ಮಾತನಾಡಿ, ನಾವು ಚರ್ಚೆ ಮಾಡಿದಾಗ ಪಕ್ಷ ಬಿಟ್ಟು ಹೋಗಲ್ಲ ಎಂದಿದ್ದಾರೆ, ಈಗ ಯಾರು ಹೋಗ್ತಿನಿ ಅಂತ ಹೇಳಂಗಿಲ್ಲ, ಅವರ ಮನಸ್ಸಿನಲ್ಲಿ ಇದ್ದದ್ದನ್ನ ಮಾಡ್ತಾರೆ, ನಾವು ಸ್ನೇಹಿತರಾಗಿ ಕೆಲವು ಸಲಹೆ ಕೊಡ್ತೇವೆ ಅಷ್ಟೇ ಎಂದರು.
ಪಕ್ಷದಲ್ಲಿ ಅಸಮಾಧಾನ ಆಗಿದ್ರಿಂದ ಸ್ವಲ್ಪ ಕೋಪಗೊಂಡಿದ್ದು ನಿಜ ಎಂದಿದ್ದಾರೆ, ನೆಗಡಿ ಆಗೇತಿ ಅಂತ ಮೂಗು ಕೋಯ್ಕಂಡ್ರೆ ತಪ್ಪು, ಕಾದು ನೋಡೋಣ ಯಾರು ಯಾವಾಗ ಹೋಗ್ತಾರೆ ಎಂದರು. ನಮಗೂ ಅಧಿಕಾರ ಸಿಗುತ್ತೆ ಅಂತ ಬಾಂಬೇ ಟಿಂ ಸೇರಿಸ್ಕೊಂಡಿದ್ದೇವೆ, ಈಗ ಅವರು ಹೋಗ್ತಿದ್ದಾರೆ ಅಂದ್ರೆ ಯಾಕೆ ಹೋಗ್ತಾರೆ ಕೇಳೋಣಾ.? ಎಂದು ಪ್ರಶ್ನಿಸಿದರು.
ರೇಣುಚಾರ್ಯ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ರೇಣುಕಾ ಮುತ್ಯಾ ಏನ್ ಕಾಂಗ್ರೆಸ್ ಸೇರೋದಿಲ್ಲ, ನಮ್ಮ ಮುತ್ಯಾಗ ಸ್ವಲ್ಪ ಭೇಟಿಯಾಗುವ ಚಾಳಿ ಇದೆ ಅದಕ್ಕಾಗಿ ಕಾಂಗ್ರೆಸ್ ನಾಯಕರನ್ನ ಭೇಟಿ ಆಗಿದ್ದಾರೆ ಅಷ್ಟೇ ಎಂದು ತಿಳಿಸಿದರು. ರೈತರ ಹೊಲಗಳಿಗೆ ನೀರು ಹರಿಸೋ ವಿಚಾರವಾಗಿ ಮಾತನಾಡಿ, ನಾಳೆ ನಾನು ಸಿಎಂ ಹಾಗೂ ಡಿಸಿಎಂ ಭೇಟಿಯಾಗಿ ರೈತರಿಗೆ ನೀರು ಹರಿಸುವ ಬಗ್ಗೆ ಚರ್ಚಿಸ್ತಿನಿ, ಕಾಂಗ್ರೆಸ್ ನಾಯಕರನ್ನ ಭೇಟಿಯಾದ ರಾಜುಗೌಡ ಅಂತಾ ಬ್ರೇಕಿಂಗ್ ಮಾಡ್ಬೇಡಿ ಎಂದು ಮನವಿ ಮಾಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.