ಬೆಂಗಳೂರು: ಚಂದ್ರಯಾನ-3ರನ್ನು ಯಶಸ್ವಿಯಾಗಿ ನಿಭಾಯಿಸಿದ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ಫ್ಲೆಕ್ಸ್ ಅಳವಡಿಸಿ ಕಾನೂನು ಉಲ್ಲಂಘಿಸಿದ್ದಾರೆ.
ಬಿಬಿಎಂಪಿ ಆದೇಶವನ್ನೂ ಲೆಕ್ಕಿಸದೆ ಹತ್ತಾರು ಫ್ಲೆಕ್ಸ್‌ಗಳನ್ನು ಅಳವಡಿಸಿದ್ದರೂ ಅಧಿಕಾರಿಗಳು ಮಾತ್ರ ಕ್ರಮಕೈಗೊಳ್ಳದೆ ಸುಮ್ಮನಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿಂದೆ ನಗರದಲ್ಲಿ ಫ್ಲೆಕ್ಸ್ ಹಾವಳಿ ಮಿತಿಮೀರಿತ್ತು. ನಗರದ ಸೌಂದರ್ಯ ಕಾಪಾಡುವಂತೆ ಹೈಕೋರ್ಟ್ ಬಿಬಿಎಂಪಿಗೆ ಛೀಮಾರಿ ಹಾಕಿದ ಬಳಿಕ ಎಚ್ಚೆತ್ತಿದ್ದ ಅಧಿಕಾರಿಗಳು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಫ್ಲೆಕ್ಸ್ ಅಳವಡಿಸುವವರಿಗೆ ದಂಡ ವಿಧಿಸುವಂತೆ ಸೂಚಿಸಿದ್ದರು. ಕೆಪಿಸಿಸಿ ಕಚೇರಿ ಮುಂದೆ ಅನಧಿಕೃತ ಬ್ಯಾನರ್ ಅಳವಡಿಸಿದ್ದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಬಿಬಿಎಂಪಿ ಅಧಿಕಾರಿಗಳು ₹50 ಸಾವಿರ ದಂಡ ವಿಧಿಸಿದ್ದರು.
ಇದೀಗ ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಹತ್ತಾರು ಫ್ಲೆಕ್ಸ್ ಅಳವಡಿಸಿದ್ದು, ಪ್ರಧಾನಿ ಕಚೇರಿಗೆ ಬಿಬಿಎಂಪಿ ಅಧಿಕಾರಿಗಳು ದಂಡ ವಿಧಿಸುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಜನ ಸಾಮಾನ್ಯರಿಗೆ ಹಾಗೂ ರಾಜ್ಯದ ರಾಜಕಾರಣಿಗಳಿಗೆ ಅನ್ವಯಿಸುವ ನಿಯಮಗಳು ಪ್ರಧಾನಿಗಳಿಗೆ ಅನ್ವಯಿಸಲ್ವಾ ಎಂಬ ಮಾತುಗಳು ಕೇಳಿಬರುತ್ತಿದೆ.
ಇದನ್ನೂ ಓದಿ; ಆ.17ರಿಂದ ಫ್ಲೆಕ್ಸ್-ಬ್ಯಾನರ್ ನಿಷೇಧ; ಬಿಬಿಎಂಪಿ ಅಧಿಕೃತ ಆದೇಶ
ಡಿಸಿಎಂ ಅವರಿಗೆ ದಂಡ ವಿಧಿಸಿದ್ದರೂ ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್ ಬ್ಯಾನರ್ ಗಳಿಗೆ ಬ್ರೇಕ್ ಬಿದ್ದಿಲ್ಲ. ರಾಜಕಾರಣಿಗಳಿಗೆ ಹಾಗೂ ಅವರ ಬೆಂಬಲಿಗರಿಗೆ ಶುಭಕೋರುವ ನೂರಾರು ಫ್ಲೆಕ್ಸ್‌ಗಳನ್ನು ಕಾಣಬಹುದಾಗಿದೆ. ನಿಯಮ ಉಲ್ಲಂಘಿಸಿ ರಸ್ತೆ ಪೂರ್ತಿ ಮೋದಿ ಸ್ವಾಗತಿಸುವ ಫ್ಲೆಕ್, ಬ್ಯಾನರ್ ಗಳನ್ನು ನಗರದ ಹಳೆ ವಿಮಾನ ನಿಲ್ದಾಣದಲ್ಲಿ ಅಳವಡಿಸಿದ್ದಾರೆ.
ರಸ್ತೆಯ ಎರಡು ಬದಿಯಲ್ಲಿ ಇಸ್ರೋಗೆ ಅಭಿನಂದನೆ ಸೂಚಿಸುವ ನಿಟ್ಟಿನಲ್ಲಿ ಮೋದಿ ಬ್ಯಾನರ್ ಅಳವಡಿಸಲಾಗಿತ್ತು. ಬಿಬಿಎಂಪಿ ಅನುಮತಿಯಿಲ್ಲದೆ ಫ್ಲೆಕ್ ಬ್ಯಾನರ್ ಅಳವಡಿಸಿದ್ದಾರೆ. ಉಪಮುಖ್ಯಮಂತ್ರಿಗಳಿಗೆ ದಂಡ ವಿಧಿಸಿದ ಬಿಬಿಎಂಪಿ ಪ್ರಧಾನಿ ಕಚೇರಿಗೆ ಫೈನ್ ಕಳಿಸುತ್ತಾ ಎಂದು ಕಾದು ನೀಡಬೇಕಾಗಿದ್ದು, ಪ್ರಧಾನಿ ಕಚೇರಿಗೆ ದಂಡ ಕಳುಹಿಸುವಂತೆ ಸಾರ್ವಜನಿಕರು ಬಿಬಿಎಂಪಿಗೆ ಒತ್ತಾಯಿಸುತ್ತಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.