ಚಿಕ್ಕೋಡಿ : ಬಿಜೆಪಿಯಿಂದ ಯಾವ ಶಾಸಕರು ಕೂಡಾ ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ ಎಂದು ಬಿಜೆಪಿಯ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದ್ದಾರೆ.
ತಾಲೂಕಿನ ತೋರಣಹಳ್ಳಿಯಲ್ಲಿಂದು ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ತಮ್ಮಲ್ಲಿನ ಅಸಮಾಧಾನಿತ ಶಾಸಕರು ಪಕ್ಷ ತೊರೆಯಬಾರದು ಎಂದು ಆಪರೇಷನ್ ಕಾಂಗ್ರೆಸ್ ಹೆಸರಲ್ಲಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಹರಿಹಾಯ್ದರು.
ಇದನ್ನೂ ಓದಿ : ‘ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಠಗೊಳಿಸುವೆ’
ತಮ್ಮ ಸಚಿವರ ವಿರುದ್ಧ ಅಸಮಾಧಾನಗೊಂಡು 30 ಜನ ಕಾಂಗ್ರೆಸ್ ಶಾಸಕರು ಸಿಎಂಗೆ ಪತ್ರ ಬರೆದಿದ್ದರು, ಆ ಅಸಮಾಧಾನಿತ ಶಾಸಕರು ಪಕ್ಷ ಬಿಟ್ಟು ಬಿಜೆಪಿಗೆ ಹೋಗಬಾರದ ರೀತಿಯಲ್ಲಿ ಹೆದರಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ಕಾಂಗ್ರೆಸ್ ಶಾಸಕರು ಈಗ ಬಿಜೆಪಿಗೆ ಬರುವುದಿಲ್ಲ. ಅಲ್ಲಿ 34 ಮಂತ್ರಿ ಸ್ಥಾನಗಳು ಫುಲ್ ಆಗಿವೆ. ಬಿಜೆಪಿಯವರು ಅಲ್ಲಿ ಹೋಗಿ ಏನೂ ಮಂತ್ರಿ ಆಗಕ್ಕಂತೂ ಆಗಲ್ಲ. ರೇಣುಕಾಚಾರ್ಯ, ಎಸ್. ಟಿ. ಸೋಮಶೇಖರ್ ಅವರು ಸಿಎಂ ಸಿದ್ದರಾಮಯ್ಯ ಭೇಟಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಐಹೊಳೆ, ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಹೋಗಿ ಭೇಟಿ ಆಗಿರುತ್ತಾರೆ ಅದಕ್ಕೆ ಹೆಚ್ಚಿನ ಮಹತ್ವ ನೀಡುವುದು ಬೇಡ ಎಂದರು.
ಈಗ ನಾನು ಕ್ಷೇತ್ರದ ಅಭಿವೃದ್ಧಿಗೆ ಹೋಗಿ ಭೇಟಿ ಮಾಡಿದ್ರೆ ಕಾಂಗ್ರೆಸ್ ಸೇರುತ್ತೇವೆ ಎಂಬ ಅರ್ಥವಾಗಲ್ಲ. ಇಲ್ಲಿದ್ದವರು ಅಲ್ಲಿ ಹೋದರೆ ಅಲ್ಲಿಯವರು ಇಲ್ಲಿ ಬರ್ತಾರೆ ಎಂದು ಆಪರೇಷನ್ ಕಮಲದ ಸುಳಿವು ನೀಡಿದರು.
ತಮ್ಮ ಶಾಸಕರನ್ನು ಹೆದರಿಸಿ ಕಟ್ಟಿ ಹಾಕಲು ಕಾಂಗ್ರೆಸ್‌ನವರು ಈ ರೀತಿ ಮಾಡುತ್ತಿದ್ದಾರೆ. ಅವರ ಶಾಸಕರು ಪಕ್ಷ ತೊರೆಯಬಾರದು ಎಂದು ಆಪರೇಷನ್ ಹಸ್ತ ಪ್ರಾರಂಭ ಮಾಡಿದ್ದಾರೆ. ಇದೆಲ್ಲಾ ಸುಳ್ಳು ಎಂದು ಶಾಸಕ ಐಹೊಳೆ ಅಲ್ಲಗಳೆದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.