ಯಾದಗಿರಿ: ಕಾಂಗ್ರೆಸ್ ಗೆ ನಿಯತ್ತಿಲ್ಲ, ವಿದೇಶಿಗರಿಂದ ಸಹಾಯ ಕೇಳುವ ಸ್ಥಿತಿಗೆ ದೇಶ ಬಂದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಾಗ್ದಾಳಿ ನಡೆಸಿದರು. ಯಾದಗಿರಿಯಲ್ಲಿ ಮಾತನಾಡಿ, ರಾಹುಲ್ ಗಾಂಧಿ ದೇಶದ ಜನರ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ದೇಶಕ್ಕೆ ಬರುವ ಯೋಗ್ಯತೆ ಇಲ್ಲ ಎಂದು ತಿಳಿಸಿದರು.
ಪಾರ್ಲಿಮೆಂಟ್‌ನಲ್ಲಿ ರಾಹುಲ್ ಗಾಂಧಿ ಗಂಟೆಗಟ್ಟಲೇ ಮಾತಾಡುತ್ತಾರೆ. ಆದರೆ ಭಾರತದಲ್ಲಿ ಮುಕ್ತ ಚರ್ಚೆಗೆ ಅವಕಾಶ ಇಲ್ಲ ಎಂದು ಹೇಳುತ್ತಾರೆ. ರಾಹುಲ್ ಗಾಂಧಿಗೆ ದೇಶದ ಬಗ್ಗೆ ನಿಯತ್ತಿಲ್ಲ, ಅವರ ಕೈಯಲ್ಲಿ, ಕುಟುಂಬದ ಕೈಯಲ್ಲಿ ಅಧಿಕಾರ ಇದ್ರೆ ಮಾತ್ರ ಇವರ ಪ್ರಕಾರ ಪ್ರಜಾಪ್ರಭುತ್ವ ಎಂದು ತೀವ್ರ ವಾಗ್ದಾಳಿ ನಡೆಸಿದರು. ಇದರ ನಡುವೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಕಿಡಿ ಕಾರಿದ್ದು, ಬ್ರಿಟನ್‌ನಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ರಾಹುಲ್ ಗಾಂಧಿ ಅತ್ಯಂತ ಬಾಲಿಶವಾಗಿ ಹೇಳಿಕೆ ನೀಡಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಅವರಿಗೆ ಮಾನಸಿಕವಾಗಿ ಏನೋ ಸಮಸ್ಯೆ ಆದ ಹಾಗಿದೆ. ಸತತ ಸೋಲಿನಿಂದ ಹತಾಶರಾಗಿ ಅವರು ದೇಶದ ಪ್ರಜಾಪ್ರಭುತ್ವದ ಬಗ್ಗೆ ಅತ್ಯಂತ ಬಾಲಿಶವಾಗಿ ಮಾತನಾಡುತ್ತಿದ್ದಾರೆ. ಮಾನಸಿಕವಾಗಿ ಅವರಿಗೆ ತೊಂದರೆ ಇದ್ದಂತೆ ಕಾಣ್ತಿದೆ ಎಂದರು. ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು ತೀವ್ರ ಟೀಕೆ ಮಾಡುತ್ತಿದ್ದಾರೆ.