Thursday, September 28, 2023
spot_img
- Advertisement -spot_img

​ನನ್ನನ್ನು ಮಂತ್ರಿ ಮಾಡದಿದ್ದಕ್ಕೆ ಧನ್ಯವಾದ : ಸಿಎಂಗೆ ಟಾಂಗ್ ಕೊಟ್ಟ ಬಿ.ಕೆ ಹರಿಪ್ರಸಾದ್​

ಬೆಂಗಳೂರು : ‘ನಾನು ಮಂತ್ರಿಯಾಗಿದ್ದರೆ ನಿಮ್ಮನ್ನೆಲ್ಲ ಭೇಟಿಯಾಗೋಕೆ ಆಗ್ತಿರಲಿಲ್ಲ. ನನ್ನನ್ನು ಮಂತ್ರಿ ಮಾಡದ್ದಕ್ಕೆ ರಾಜ್ಯದ ಮುಖ್ಯಮಂತ್ರಿಗಳಿಗೆ ಧನ್ಯವಾದ’ ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತಿ ಹಿಂದುಳಿದ ವರ್ಗಗಳ ಬೃಹತ್​​ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು 40 ವರ್ಷದ ಹಿಂದೆಯೇ ಕೊಳಚೆ ಮಂಡಳಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ನಮ್ಮ‌ಸಮುದಾಯದವರು ಕರ್ನಾಟಕದಲ್ಲಿ ಮಾತ್ರವಲ್ಲ, ಆಂಧ್ರ, ಕೇರಳದಲ್ಲೂ ಇದ್ದಾರೆ ಎಂದರು.

ನಮ್ಮದು ಹಿಂದುಳಿದವರ ಒಕ್ಕೂಟ ಅಂದರೆ ನಂಬೋದಿಲ್ಲ. ನಾವು ಶೇ. 68ರಷ್ಟು ಜಿಎಸ್ ಟಿ ಕಟ್ಟುತ್ತಿದ್ದೇವೆ. ಮೇಲ್ಜಾತಿಯವರು ಕೇವಲ 10ರಷ್ಟು ಜಿಎಸ್ ಟಿ ಕಟ್ಟುತ್ತಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ನಮ್ಮ ಕೊಡುಗೆ ಹೆಚ್ಚಿದೆ. ನಮ್ದು ವೋಟ್ ಹಾಕೋ ಟೀಮ್, ನೋಟ್ ಕೋಡೋರು ಟೀಮ್. ಆದರೆ, ಅಧಿಕಾರ ನಡೆಸೋರು ಬೇರೆ. ಬೋರ್ಡ್ ಚೇರ್ಮನ್ ಮಾಡುವುದಕ್ಕೂ ಹಿಂದೆ ಮುಂದೆ ನೋಡ್ತಾರೆ ಎಂದು ಅಸಾಮಾಧಾನ ಹೊರ ಹಾಕಿದರು.

ಇದನ್ನೂ ಓದಿ : ‘ಜಾತ್ಯಾತೀತ ಅಂದ್ಕೊಂಡು ಕೋಮುವಾದಿಗಳ ಜೊತೆ ಕೈ ಜೋಡಿಸಿದ್ದಾರೆ’

ಈಡಿಗ, ಬಿಲ್ಲವ, ನಾಮಧಾರಿಗಳು ಏನೋ ಹೆಂಡ ಮಾರೋರು, ಇವರಿಗೆ ಏನು ಯೋಗ್ಯತೆ ಇದೆ ಅಂತ ಮಾತನಾಡ್ತಾರೆ. ಈ ರಾಜ್ಯದ ಭೂಗಳ್ಳರು ಈ ಮಾತುಗಳನ್ನು ಹೇಳ್ತಿದ್ದಾರೆ. ನಾವು 36 ಸಾವಿರ ಕೋಟಿ ರೂಪಾಯಿ ತೆರಿಗೆ ಕಟ್ಟುತ್ತಿದ್ದೇವೆ. ನಾವು ಯಾರ ಮುಲಾಜಲ್ಲೂ ಇಲ್ಲ. ಆದರೆ, ನಾನು ಯಾವತ್ತೂ ತಾಳ್ಮೆ ಕಳೆದುಕೊಂಡಿಲ್ಲ ಎಂದು ಹೇಳಿದರು.

ಕಾರಿನಲ್ಲಿ ಕೂತ ತಕ್ಷಣ ದೇವರಾಜ ಅರಸು ಆಗಲ್ಲ: ದೇವರಾಜ ಅರಸು ಅವರ ಜನ್ಮ ದಿನದಂದು ಸಿಎಂ ಸಿದ್ದರಾಮಯ್ಯ ಅರಸು ಅವರ ಹಳೆಯ ಕಾರಿನಲ್ಲಿ ಸುತ್ತಾಡಿದ್ದರು. ಈ ವಿಚಾರವನ್ನು ಪ್ರಸ್ತಾಪಿಸಿ ಟಾಂಗ್ ನೀಡಿದ ಹರಿಪ್ರಸಾದ್, ಅರಸು ಅವರ ಕಾರಿನಲ್ಲಿ ಕುಳಿತ ತಕ್ಷಣ ಯಾರೂ ಅವರ ಹಾಗೆ ಆಗಲ್ಲ. ಅರಸು ಅವರ ಚಿಂತನೆ ನಮ್ಮಲ್ಲಿ ಬರಬೇಕು. ಇವರ ಕೈಯಲ್ಲಿ ಅರಸು ಅವರ ಮೊಮ್ಮಗನನ್ನು ಎಂಎಲ್ ಸಿ ಮಾಡೋಕೆ ಆಗಿಲ್ಲ ಎಂದರು.

ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ, ಹೀಗೆ ಎಲ್ಲಾ ಗಾಂಧಿಗಳ ಜೊತೆ ನಾನು ಕೆಲಸ ಮಾಡಿದ್ದೇನೆ. ಆದರೆ, ಅಧಿಕಾರಕ್ಕಾಗಿ ಯಾರ ಬಳಿಯೂ ಹೋಗಿಲ್ಲ ಎಂದು ಹೇಳಿದರು.

ಇದನ್ನೂ ಓದಿ : ಕೈ ಶಾಸಕ, ಬಿಜೆಪಿ ಸಂಸದರ ನಡುವೆ ಸಕ್ಕರೆ ಕಾರ್ಖಾನೆಯ ಹಗ್ಗ ಜಗ್ಗಾಟ

ಕಾಂಗ್ರೆಸ್ ಪಕ್ಷದ ಸಿದ್ದಾಂತದ ಮೇಲೆ ನನಗೆ ನಂಬಿಕೆಯಿದೆ. ಸರ್ಕಾರಕ್ಕೆ ಒತ್ತಾಯ ಇಷ್ಟೇ,ಸಾರಾಯಿ ಮಾಡೋರು ಇವತ್ತು ಪಾನಿಪುರಿ ಬೇಲ್ ಪುರಿ ಮಾರುತ್ತಿದ್ದಾರೆ. ಅವರಿಗೆಲ್ಲ 2 ಎಕರೆ ಜಮೀನು ಕೊಡಬೇಕು ಎಂದು ಮನವಿ ಮಾಡಿದರು. ಮೊದಲು ನೀವು ಸಶಕ್ತರಾಗಿ, ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಿ. ಮುಂದಿನ ಚುನಾವಣೆಯಲ್ಲಿ ಯಾರು ನಮ್ಮ ಪರವಾಗಿ ನ್ಯಾಯ ಒದಗಿಸುವುದಿಲ್ವೋ, ಅವರಿಗೆ ನಮ್ಮ ಶಕ್ತಿ ಏನೆಂಬುವುದು ತೋರಿಸಿ ಎಂದು ನೆರೆದಿದ್ದ ಜನರಿಗೆ ಕರೆ ನೀಡಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles