ಬೆಂಗಳೂರು: ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರಾಗಿದ್ದ ಬಿ.ಕೆ ಹರಿಪ್ರಸಾದ್ ಸಚಿವ ಸ್ಥಾನ ಕೈ ತಪ್ಪಿದ್ದು, ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ಮಟ್ಟದಲ್ಲೂ ಉತ್ತಮ ಬಾಂಧವ್ಯ ಹೊಂದಿದ್ದ ಬಿ ಕೆ ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದು, ಇದೀಗ ಸಚಿವ ಸ್ಥಾನ ಕೈ ತಪ್ಪಿದ್ದು, ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಮೊದಲ ಸಂಪುಟ ರಚನೆ ಸಂದರ್ಭದಲ್ಲೇ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿತ್ತು. ಆದರೆ ಮೊದಲ ಹಂತದ ಸಂಪುಟ ರಚನೆ ಸಂದರ್ಭದಲ್ಲಿ ಅವರಿಗೆ ಸಚಿವ ಸ್ಥಾನ ನೀಡಲಾಗಿರಲಿಲ್ಲ.
ಪಕ್ಷದ ಕೆಲವರ ನಡೆಯಿಂದ ಅಸಮಾಧಾನಗೊಂಡು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸಚಿವ ಸ್ಥಾನ ಕೊಡಿಸಲು ಡಿಕೆ ಶಿವಕುಮಾರ್ ಸಹ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಹರಿಪ್ರಸಾದ್ ಅವರಿಗೆ ಮಂತ್ರಿಭಾಗ್ಯ ಸಿಕ್ಕಿಲ್ಲ ಎನ್ನಲಾಗಿದೆ.
ಈಡಿಗ ಕೋಟಾದಲ್ಲಿ ಹರಿಪ್ರಸಾದ್ ಬದಲು ಮಧುಬಂಗಾರಪ್ಪಗೆ ನೀಡಲು ಒತ್ತಾಯಿಸಿದ್ದರು. ಮಧು ಬಂಗಾರಪ್ಪ ಸೇರ್ಪಡೆಯಾದ್ರೆ ಶಿವಮೊಗ್ಗದಲ್ಲಿ ಹೆಚ್ಚಿನ ಬಲ ಸಿಗಲಿದೆ. ಹಿನ್ನೆಲೆಯಲ್ಲಿ ಹರಿಪ್ರಸಾದ್ ಬದಲಿಗೆ ಮಧುಬಂಗಾರಪ್ಪಗೆ ಸಚಿವ ಸ್ಥಾನ ನೀಡಲೇಬೇಕೆಂದು ಸಿದ್ದರಾಮಯ್ಯ ವಾದ ಮಾಡಿದ್ದರು.