ಬಳ್ಳಾರಿ : ಬಿಜೆಪಿ ರಾಜ್ಯದಲ್ಲಿ ಸುಳ್ಳು ಸುದ್ದಿ ಹರಡುವ ಪ್ರಯತ್ನ ಮಾಡುತ್ತಿದೆ. ಬಿ.ಎಲ್. ಸಂತೋಷ್ ಹಿರಿಯ ನಾಯಕರಿದ್ದಾರೆ, ಅವರು ಈ ರೀತಿ ಸುಳ್ಳು ಹೇಳಿಕೆ ಕೊಡಬಾರದು. ಯಾರೊಬ್ಬರೂ ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ, ಬೇರೆ ಪಕ್ಷದ ಜೊತೆ ಯಾರೂ ಗುರುತಿಸಿಕೊಂಡಿಲ್ಲ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಯುವಜನ ಸಬಲೀಕರಣ, ಕ್ರೀಡಾ ಇಲಾಖೆ ಸಚಿವ ಬಿ ನಾಗೇಂದ್ರ ತಿರುಗೇಟು ನೀಡಿದ್ದಾರೆ.
40 ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಬಿ.ಎಲ್. ಸಂತೋಷ್ ಹೇಳಿಕೆಗೆ, ನಗರದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ನಾವು ಐದು ವರ್ಷಗಳ ಕಾಲ ಅದ್ಬುತ ಸರ್ಕಾರ ನಡೆಸುತ್ತೇವೆ. ಗ್ಯಾರಂಟಿಗಳನ್ನು ಜನರಿಗೆ ಮುಟ್ಟಿಸುವುದೇ ನಮ್ಮ ಉದ್ದೇಶವಾಗಿದೆ. ಪಕ್ಷ ಬಿಡೋದು, ಆಂತರಿಕ ಕಚ್ಚಾಟ ಎನ್ನುವುದು ಎಲ್ಲವೂ ಸುಳ್ಳು. ನಾವು 136 ಶಾಸಕರು ಜೊತೆಯಾಗಿದ್ದೇವೆ. ಕಾಂಗ್ರೆಸ್ ಪಕ್ಷದ ಸಿದ್ದಾಂತ ಮೆಚ್ಚಿ ಬೇರೆ ಪಕ್ಷದವರು ನಮ್ಮ ಪಕ್ಷ ಸೇರಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ತಮಿಳುನಾಡಿಗೆ ಕಾವೇರಿ ನೀರು : ಹೆಚ್ಚಾಯ್ತು ಸಕ್ಕರೆ ನಾಡಲ್ಲಿ ಪ್ರತಿಭಟನೆಯ ಕಾವು!
ಲೋಕಸಭೆ ಚುನಾವಣೆ ಬಳಿಕವೂ ಏನು ಆಗಲ್ಲ, ನಾವು 28 ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುತ್ತೆವೆ. ಮುಂಬರಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ದೇಶಾದ್ಯಂತ ಕಾಂಗ್ರೆಸ್ ಗೆಲ್ಲಲಿದೆ. ಕಾಂಗ್ರೆಸ್ ಶಾಸಕರು ಪತ್ರ ಬರೆದ ವಿಚಾರವನ್ನು ಸಿಎಲ್ ಪಿ ಸಭೆಯಲ್ಲಿ ಚರ್ಚಿಸಲಾಗಿದೆ. ರಾಜಕೀಯ ಚದುರಂಗದಾಟದಲ್ಲಿ ಈ ತರಹದ ಹೇಳಿಕೆಗಳು ಸಾಮಾನ್ಯವಾಗಿವೆ ಎಂದರು.
ಕಾಂಗ್ರೆಸ್ ಬಿಟ್ಟು ಹೋದವರನ್ನು ಬಾಂಬೆ ಬಾಯ್ಸ್ ಎಂದು ಯಾರು ಕರೆದಿಲ್ಲ , ಅದು ಮಾಧ್ಯಮಗಳ ಸೃಷ್ಠಿ, ನಾವೆಲ್ಲರೂ ಕರ್ನಾಟಕದ ಬಾಯ್ಸ್. ಬಾಂಬೆ ಬಾಯ್ಸ್ ಅಂತ ಯಾರು ಇಲ್ಲ ಎಂದರು
ಒನ್ ನೇಷನ್, ಒನ್ ಎಲೆಕ್ಷನ್ ವಿಚಾರವನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಭಾರತ ಪ್ರಜಾಪ್ರಭುತ್ವ ದೇಶ, ಇಲ್ಲಿ ಒನ್ ನೇಷನ್ ಒನ್ ಎಲೆಕ್ಷನ್ ಕಷ್ಟವಾಗುತ್ತದೆ. ಉತ್ತರ ಹಾಗೂ ದಕ್ಷಿಣದಲ್ಲಿ ಒಂದೊಂದು ರೀತಿಯಾಗಿ ಚುನಾವಣೆ ನಡೆಯುತ್ತದೆ. ಬೇರೆ ಬೇರೆ ಕಡೆ ಭಿನ್ನ ರಾಜಕಿಯ ನೀತಿಗಳಿವೆ. ಈ ಬಗ್ಗೆ ನಮ್ಮ ವರಿಷ್ಠರು ಚರ್ಚಿಸಿ ತೀರ್ಮಾನ ತಿಳಿಸುತ್ತಾರೆ ಎಂದು ಪರೋಕ್ಷವಾಗಿ ಏಕ ರೀತಿಯ ಚುನಾವಣೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.