ಬೆಂಗಳೂರು: ನಾಳೆ ಒಂದು ಕಡೆ ಸಿಇಟಿ ಪರೀಕ್ಷೆ, ಇನ್ನೊಂದು ಕಡೆ ಸಿದ್ದರಾಮಯ್ಯ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ, ಈ ಹಿನ್ನೆಲೆ ಬಿಎಲ್ ಸಂತೋಷ್ ಟ್ವೀಟ್ ಮಾಡಿದ್ದಾರೆ.
ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಟ್ವೀಟ್ ಮೂಲಕ ಕೌಂಟರ್ ಕೊಟ್ಟಿದ್ದಾರೆ. “ನಮ್ಮ ನಿಯೋಜಿತ ಸಿಎಂ ಟ್ವೀಟ್ ಮಾಡಿ ತುಂಬಾ ದಿನಗಳು ಕಳೆದಿಲ್ಲ. ನಾಳೆ ರಾಜ್ಯಾದ್ಯಂತ ಮತ್ತು ಬೆಂಗಳೂರಿನಲ್ಲಿ ಸಿಇಟಿ ಪರೀಕ್ಷೆ ಇದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರೇ ನಿಮ್ಮ ಪ್ರಮಾಣ ವಚನ ಒಂದು ಅಥವಾ ಎರಡು ದಿನಗಳ ಕಾಲ ತಡೆದಿದ್ದರೆ ಏನಾಗುತ್ತಿತ್ತು? ವಿದ್ಯಾರ್ಥಿಗಳಿಗೂ ಸಮಸ್ಯೆಯಾಗುತ್ತಿರಲಿಲ್ಲ” ಎಂದು ಹೇಳಿದ್ದಾರೆ.
ಅಂದು ಮೊದಲ ಸುತ್ತಿನ ನೀಟ್ ಪರೀಕ್ಷೆ ನಡೆದ ದಿನ ಮೋದಿ ರೋಡ್ ಶೋ ನಡೆದಿತ್ತು. ಅದಕ್ಕೆ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.ರೋಡ್ ಶೋ ಅತ್ಯಂತ ಬೇಜವಾಬ್ದಾರಿತನದ ನಡೆ. ಮೋದಿ ಅವರು ಪ್ರಚಾರ ಮಾಡಲಿ ನಮ್ಮ ತಕರಾರು ಇಲ್ಲ. ಆದರೆ ವಿದ್ಯಾರ್ಥಿಗಳಿಗೆ ಆಗುವ ತೊಂದರೆಗೆ ಯಾರು ಹೊಣೆ? ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರಶ್ನಿಸಿದ್ದರು.