ಬೆಂಗಳೂರು : ಬಿಎಂಟಿಸಿ ಬಸ್ ಗಳಲ್ಲಿ ರಾತ್ರಿ ಹೊತ್ತು ಹೆಚ್ಚುವರಿ ಟಿಕೆಟ್ ಶುಲ್ಕ ಪಡೆಯುವುದನ್ನು ರದ್ದುಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಇಂದಿನ ಈ ಬಸ್ ಗಳಲ್ಲಿ ಏಕರೂಪದ ಪ್ರಯಾಣ ದರ ಜಾರಿಯಲ್ಲಿರಲಿದೆ.
ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿರುವ ಬಿಎಂಟಿಸಿ, ಪ್ರಯಾಣಿಕರಿಗೆ ತೊಂದರೆಯಾಗದಂತೆ ಮತ್ತು ಸಂಸ್ಥೆಗೆ ನಷ್ಟ ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಇಂದಿನಿಂದಲೇ (ಸೆ.6) ಹೊಸ ನಿಯಮ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಬಿಎಂಟಿಸಿಯು ಪ್ರಸ್ತುತ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯ ನಡುವಿನ ರಾತ್ರಿ ಸೇವೆಗಳಿಗೆ ಸಾಮಾನ್ಯ ದರಕ್ಕಿಂತ ಒಂದೂವರೆ ಪಟ್ಟು ದರವನ್ನು ವಿಧಿಸುತ್ತಿತ್ತು.


ಬಿಎಂಟಿಸಿ ಬಸ್ ಗಳಲ್ಲಿ ರಾತ್ರಿ ಹೊತ್ತು ಹೆಚ್ಚುವರಿ ಹಣ ಪಡೆಯುವುದನ್ನು ಶೀಘ್ರದಲ್ಲೇ ರದ್ದುಪಡಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೋಮವಾರ ಹೇಳಿದ್ದರು.
ನಗರದ ಕಲಾಸಿಪಾಳ್ಯ ಬಸ್ ನಿಲ್ದಾಣವನ್ನು ಪರಿಶೀಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ಬಿಎಂಟಿಸಿ ಬಸ್ ಗಳಲ್ಲಿ ರಾತ್ರಿ ಹೊತ್ತು ಹೆಚ್ಚುವರಿ ಟಿಕೆಟ್ ಶುಲ್ಕ ಪಡೆಯುವುದನ್ನು ರದ್ದುಪಡಿಸಲಾವುದು. ಸೆಪ್ಟೆಂಬರ್ 25ರಂದು ಬಿಎಂಟಿಸಿ ಪ್ರಾರಂಭವಾಗಿ 25 ವರ್ಷ ಪೂರ್ಣಗೊಳ್ಳಲಿದೆ. ಅಂದು ‘ನಮ್ಮ ಬಿಎಂಟಿಸಿ (Namma BMTC) ಬಸ್ ಟ್ರ್ಯಾಕಿಂಗ್ ಮೊಬೈಲ್ ಆ್ಯಪ್’ ಬಿಡುಗಡೆ ಮಾಡಲಾಗುವುದು. ಈ ಆ್ಯಪ್ ಮೂಲಕ ಪ್ರಯಾಣಿಕರು ಬಿಎಂಟಿಸಿ ಬಸ್‌ಗಳನ್ನು ಟ್ರ್ಯಾಕ್ ಮಾಡಬಹುದು ಮತ್ತು ಆ್ಯಪ್ನಲ್ಲಿ ಟಿಕೆಟ್ ಕೂಡ ಪಡೆಯಬಹುದು ಎಂದು ತಿಳಿಸಿದ್ದರು.
ಇದನ್ನೂ ಓದಿ : ಬಂದ್ ಕರೆ ಕೊಟ್ಟ ಖಾಸಗಿ ಸಾರಿಗೆ ಒಕ್ಕೂಟ : ಸುದ್ದಿಗೋಷ್ಠಿ ಕರೆದ ಸಾರಿಗೆ ಸಚಿವರು
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKSRTC) ಬಸ್ಗಳಲ್ಲಿ ಯುಪಿಐ ಮೂಲಕ ಟಿಕೆಟ್ ಪಡೆಯುವ ವ್ಯವಸ್ಥೆ ಪ್ರಾಯೋಗಿಕವಾಗಿ ಪರಿಚಯಿಸಲಾಗಿದೆ. ಇದು ಯಶಸ್ವಿಯಾದರೆ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ಗಳಲ್ಲೂ ಪರಿಚಯಿಸಲಾಗುವುದು ಎಂದಿದ್ದರು.
ಸಚಿವರು ಹೇಳಿಕೆ ನೀಡಿದ ಬೆನ್ನಲ್ಲೇ, ರಾತ್ರಿ ಸೇವೆ ಬಸ್ ಗಳಲ್ಲಿ ಹೆಚ್ಚುವರಿ ಶುಲ್ಕ ರದ್ದುಪಡಿಸುವ ಸಂಬಂಧ ಬಿಎಂಟಿಸಿ ತನ್ನ ಕೆಳ ಘಟಕಗಳಿಗೆ ಅಧಿಕೃತ ಆದೇಶ ಹೊರಡಿಸಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.